ಕುಶಾಲನಗರ/ಕೊಡಗು: ಬ್ರಹ್ಮಗಿರಿ ಬೆಟ್ಟ ಕುಸಿದು ಅರ್ಚಕರ ಐವರು ಕುಟುಂಬದವರು ಕಣ್ಮರೆ ಆಗಿರುವುದು ನೋವುಂಟು ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿದಿದ್ದು ನೋವಿನ ಸಂಗತಿ. ಹಿಂದಿನ ಕಹಿ ಘಟನೆ ಮರುಕಳಿಸಬಾರದು ಎಂದು ಎನ್‌ಡಿಆರ್‌ಎಫ್ ಮೊದಲೇ ಕರೆಸಿದ್ದೆವು. ತಲಕಾವೇರಿಯ ಪ್ರಧಾನ ಅರ್ಚಕರಾಗಿದ್ದ ನಾರಾಯಣ್ ಆಚಾರ್ ಅವರ ಪತ್ನಿ, ಅಣ್ಣ ಹಾಗೂ ಅರ್ಚಕ ಸಹಾಯಕರು ಸೇರಿದಂತೆ 5 ಜನರು ನಾಪತ್ತೆ ಆಗಿರುವುದು ಬೇಸರವಾಗಿದೆ ಎಂದರು.
ನಾರಾಯಣ್ ಆಚಾರ್ ಅವರು ಅಧಿಕಾರಿಗಳಾದ ಪಿಡಿಒ, ಪೊಲೀಸರ ಮಾತು ಕೇಳಿದ್ದರೆ ಈ ದುರಂತವನ್ನು ತಪ್ಪಿಸಬಹುದಿತ್ತು. ಘಟನೆಯಿಂದ ಬಹಳ ಆಘಾತವಾಗಿದೆ ಎಂದರು.
ಈಗಾಗಲೇ ವ್ಯಾಪ್ತಿಯಲ್ಲಿ ಮುಂದಾಲೋಚನೆಯಿಂದ ಆಗಬಹುದಾದ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ 20 ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಭಾಗಮಂಡಲ ತ್ರಿವೇಣಿ ಸಂಗಮ ಪೂರ್ಣ ಮುಳುಗಡೆ ಆಗಿದೆ. ವ್ಯವಸ್ಥಿತ ರೀತಿಯಲ್ಲಿ ಪರಿಹಾರದ ಕೆಲಸ ಆಗಿದೆ. ಭಾಗಮಂಡಲದ 20 ಕುಟುಂಬಗಳು, ವಿರಾಜಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 17 ಕುಟುಂಬಗಳು ಪರಿಹಾರ ಕೇಂದ್ರದಲ್ಲಿವೆ. ವಿರಾಜಪೇಟೆಯ ಚಿಕ್ಕಪೇಟೆಯಲ್ಲಿ ಮತ್ತೊಂದು ಕಾಳಜಿ ಕೇಂದ್ರವನ್ನು ಮೀಸಲಿರಿಸಲಾಗಿದೆ. ವಿರಾಜಪೇಟೆಯ ಅಯ್ಯಪ್ಪ ಬೆಟ್ಟ ಬಿರುಕು ಬಿಟ್ಟಿದೆ. ಅಲ್ಲಿದ್ದವರನ್ನು ಸುರುಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು. ಅಯ್ಯಪ್ಪ ಬೆಟ್ಟಕ್ಕೆ ಸ್ವತಃ ನಾನೇ ಹೋಗಿ ಅಲ್ಲಿನ ಜನರಿಗೆ ಮನವಿ ಮಾಡುತ್ತೇವೆ ಎಂದರು.
ಇನ್ನು ಪ್ರಧಾನ ಮಂತ್ರಿ ಆವಸ್ ಯೋಜನೆಯಿಂದ ರಾಜ್ಯಕ್ಕೆ 300 ಕೋಟಿ ಬಿಡುಗಡೆ ಆಗಿದೆ. ಜನತೆಯ ನೆರವಿಗೆ ಮೊದಲು ಸ್ಪಂದಿಸುವಂತೆ ಮುಖ್ಯಮಂತ್ರಿ ಹೇಳಿದ್ದಾರೆ. ಕಳೆದ ಬಾರಿ 500 ಕೋಟಿ ಘೋಷಿಸಿ 200 ಕೋಟಿ ಬಿಡುಗಡೆ ಮಾಡಿದ್ದೇವೆ. ಬರಗಾಲ, ಪ್ರವಾಹ, ಕೋವಿಡ್-19 ರಿಂದ ಸಾಕಷ್ಟು ಸಮಸ್ಯೆಗಳು ಉಂಟಾಯಿತು. ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಕಾರ್ಯವನ್ನು ಸರ್ಕಾರ ಮಾಡಿದೆ ಎಂದು ತಿಳಿಸಿದರು.
1200 ಕೋಟಿಗೂ ಹೆಚ್ಚಿನ ಹಣ ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಯಲ್ಲಿದೆ. ರಾಜ್ಯದ ಎಲ್ಲಾ ಜಲಾಶಯಗಳು ಶೇ.80 ರಷ್ಟು ತುಂಬಿದ ನಂತರ ನೀರನ್ನು ಬಿಡುವ ಕಾರ್ಯ ಮಾಡಲು ತಿಳಿಸಿದ್ದೇವೆ. ಪ್ರತಿ 2 ಗಂಟೆಗೆ ಒಮ್ಮೆ ಜಲಾಶಯದ ಮಾಹಿತಿ ಪಡೆಯಲಾಗುತ್ತಿದೆ. ಕಳೆದ ಬಾರಿಯಷ್ಟು ನೋವನ್ನು ಪಡಬಾರದು ಎಂದು ಮುನ್ನೆಚ್ಚರಿಕೆ ವಹಿಸಿದ್ದೇವೆ. ಜಿಲ್ಲೆಯಲ್ಲಿ 30 ಕಡೆ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿದಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.