ಕೊಡಗು: ಸೆಲ್ಫಿ ತೆಗೆದುಕೊಳ್ಳುವ ವೇಳೆ ಜಾರಿ ಬಿದ್ದು ನೀರುಪಾಲಾಗಿದ್ದ ಪ್ರವಾಸಿಗನ ಮೃತದೇಹ ಪತ್ತೆಯಾಗಿದೆ. ಜಿಲ್ಲೆಯ ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯ ಮುಂಭಾಗದ ಸೇತುವೆ ಬಳಿ ಗುರುವಾರ ಘಟನೆ ನಡೆದಿತ್ತು. ಬೆಂಗಳೂರು ಮೂಲದ ಸಂದೀಪ್ (41) ಸೆಲ್ಫಿ ಕ್ರೇಜ್‌ಗೆ ಪ್ರಾಣ ಕಳೆದುಕೊಂಡ ವ್ಯಕ್ತಿಯಾಗಿದ್ದು, ಶುಕ್ರವಾರ ಮಧ್ಯಾಹ್ನದ ವೇಳೆಗೆ ಮೃತದೇಹ ಪತ್ತೆಹಚ್ಚಲಾಗಿದೆ.
ಮಳೆಗಾಲದ ಪ್ರವಾಸದ ವೇಳೆ ಮುನ್ನೆಚ್ಚರಿಕೆ ವಹಿಸುವಂತೆ ಸರ್ಕಾರ, ಜಿಲ್ಲಾಡಳಿತ ಪದೇ ಪದೆ ಎಚ್ಚರಿಸುತ್ತಿದ್ದರೂ ಜನರು ಸೆಲ್ಫಿ, ಫೋಟೊ ಹಾಗೂ ವಿಡಿಯೋ ಗೀಳಿಗೆ ಬಿದ್ದು ಅವಘಡಗಳು ಸಂಭವಿಸುತ್ತಲೇ ಇವೆ. ಮೃತ ಸಂದೀಪ್ ತನ್ನ ಮೂವರು ಗೆಳೆಯರೊಂದಿಗೆ ಕಾರಿನಲ್ಲಿ ಬೆಂಗಳೂರಿನಿಂದ ಕೊಡಗು ಜಿಲ್ಲೆಗೆ ಪ್ರವಾಸಕ್ಕೆ ಎಂದು ಬಂದಿದ್ದ. ಮೈಸೂರು ಮಾರ್ಗವಾಗಿ ಕೊಡಗಿನ ಗೋಣಿಕೊಪ್ಪ ಹಾಗೂ ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿದ್ದರು. ಗುರುವಾರ ಹಾರಂಗಿ ಜಲಾಶಯದ ಮುಂಭಾಗದ ಸೇತುವೆ ಮೇಲೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ. ಈ ವೇಳೆ, ಸೇತುವೆ ಕಟ್ಟೆ ಮೇಲೆ ನಿಲ್ಲಲು ಮುಂದಾದ ಸಂದೀಪ್ ಆಕಸ್ಮಿಕವಾಗಿ ನದಿಗೆ ಕಾಲು ಜಾರಿ ಬಿದ್ದು ಕಣ್ಮರೆಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಲಾಶಯದಿಂದ ಕಾವೇರಿ ನದಿಗೆ 4 ಕ್ರಸ್ಟ್ರರ್ ಗೇಟ್ ಮೂಲಕ ನೀರು ಬಿಡಲಾಗಿತ್ತು. ಇದನ್ನು ಕಂಡು ಸೆಲ್ಫಿ ತೆಗೆಯಲು ಮುಂದಾಗಿದ್ದರು. ಸೇತುವೆ ಮೇಲಿಂದ ಬಿದ್ದು ನೀರುಪಾಲಾದ ಸಂದೀಪ್ಗಾಗಿ ಗುರುವಾರ ನಿರಂತರ ಹುಡುಕಾಟ ನಡೆಸಿದರೂ ಶವ ಪತ್ತೆಯಾಗಿರಲಿಲ್ಲ. ಶುಕ್ರವಾರವೂ ಪತ್ತೆ ಕಾರ್ಯ ಮುಂದುವರೆಸಲಾಗಿದ್ದು, ಮಧ್ಯಾಹ್ನದ ಹೊತ್ತಿಗೆ ಘಟನೆ ನಡೆದ ಸ್ವಲ್ಪ ದೂರದಲ್ಲಿಯೇ ಶವವನ್ನು ಅಗ್ನಿಶಾಮಕದಳ ಹಾಗೂ ತಜ್ಞರ ತಂಡ ಪತ್ತೆ ಮಾಡಿದೆ. ಮರಣೋತ್ತರ ಪರೀಕ್ಷೆ ನಡೆಸಿ ಸಂಜೆ ವೇಳೆಗೆ ಕುಟುಂಬಸ್ಥರಿಗೆ ಶವ ಹಸ್ತಾಂತರ ಮಾಡಲಾಗಿದೆ.
ಕುಶಾಲನಗರ ಅಗ್ನಿಶಾಮಕ ಸಿಬ್ಬಂದಿ, ದುಬಾರೆ ರಿವರ್ ರ‍್ಯಾಪ್ಟಿಂಗ್ ತಂಡ ಹಾಗೂ ಈಜು ತಜ್ಞರಿಂದ ಮೃತದೇಹಕ್ಕೆ ಹುಡುಕಾಟ ನಡೆಸಲಾಗಿತ್ತು. ಹಾರಂಗಿ ಜಲಾಯಶಯದ ಹೊರ ಹರಿವು ಸ್ಥಗಿತಗೊಳಿಸಿ ಹುಡುಕಾಟ ನಡೆಸಿದಾಗ ಸೇತುವೆ ಮುಂಭಾಗದಲ್ಲಿ ಮೃತದೇಹ ಪತ್ತೆಯಾಗಿದೆ. ದುರಂತಕ್ಕೆ ಹಾರಂಗಿ ಜಲಾಶಯದ ಅಧಿಕಾರಿಗಳ ನಿರ್ಲಕ್ಷ್ಯವೂ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಹಾರಂಗಿ ಜಲಾಶಯ ತುಂಬಿದ್ದು, ಭಾರಿ ಪ್ರಮಾಣದ ನೀರು ಹೊರಬಿಡಲಾಗುತ್ತಿದೆ. ಇದರಿಂದ ನಾಲೆಗಳ ಭಾಗದಲ್ಲೂ ಹೆಚ್ಚಿನ ನೀರು ಹರಿದು ಹೋಗುತ್ತಿದೆ. ಬಿದ್ದ ರಭಸ ಹಾಗೂ ನೀರಿನ ಹರಿವಿನ ಪ್ರಮಾಣಕ್ಕೆ ಸಂದೀಪ್ ಕೊಚ್ಚಿ ಹೋಗಿದ್ದಾರೆ. ಸಂದೀಪ್ ಕಣ್ಣು ಮುಂದೆಯೇ ನೀರಿನಲ್ಲಿ ಕೊಚ್ಚಿಹೋದರೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಜೊತೆಗಿದ್ದ ಸ್ನೇಹಿತರು ರೋದಿಸಿದರು.
ಇದನ್ನೂ ಓದಿ: Watch: ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ನೀರಿನಲ್ಲಿ ಕೊಚ್ಚಿಹೋದ ಯುವಕ.. ದೃಶ್ಯ ಮೊಬೈಲ್ನಲ್ಲಿ ಸೆರೆ