ಮಡಿಕೇರಿ(ಕೊಡಗು): ಕಾವೇರಿ ತೀರ್ಥೋದ್ಭವಕ್ಕೆ ದಿನಾಂಕ ನಿಗದಿಯಾದ ಬೆನ್ನಲ್ಲೇ ಅಂದು ಮಹಾಮಾರಿ ಕೋವಿಡ್ ಸೋಂಕು ಹರಡದಂತೆ ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಸಂಬಂಧ ಸಿದ್ಧತೆ ಸಭೆ ಬಳಿಕ ಮಾಹಿತಿ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಕೋವಿಡ್ ವ್ಯಾಕ್ಸಿನೇಷನ್ ಹಾಕಿಸಿಕೊಂಡವರು ಹಾಗೂ ನೆಗೆಟಿವ್ ವರದಿ ತೋರಿಸಿದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಇದೇ 17 ರಂದು ತಲಕಾವೇರಿಗೆ ಬರುವ ಎಲ್ಲಾ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ವಾಹನಗಳನ್ನು ಭಾಗಮಂಡಲದಲ್ಲಿ ನಿಲ್ಲಿಸುವಂತೆ ಆದೇಶ ಮಾಡಲಾಗಿದೆ. ತೀರ್ಥೋದ್ಭವಕ್ಕೆ ಬರುವ ಭಕ್ತರಿಗೆ ವಾಹನವನ್ನು ಕೆಳಗೆ ನಿಲ್ಲಿಸಿ ತಲಕಾವೇರಿ ವರೆಗೂ ನಡೆದುಕೊಂಡು ಹೋಗಬೇಕು. ಅಲ್ಲದೆ ಕೋವಿಡ್ ನಿಯಮ ಪಾಲನೆ ಮಾಡಬೇಕು. ಕೋವಿಡ್ ಲಸಿಕೆ ಪಡೆದವರಿಗೆ ಮತ್ತು ನೆಗೆಟಿವ್ ವರದಿ ಇದ್ರೆ ಮಾತ್ರ ಬೆಟ್ಟ ಹತ್ತಿ ತಲಕಾವೇರಿಗೆ ಬರಬೇಕು. ವರದಿ ಇಲ್ಲದೆ ಇದ್ರೆ ಮೇಲೆ ಬಿಡಲು ಸಾಧ್ಯ ವಿಲ್ಲ ಎಂದರು.
ತಲಕಾವೇರಿಗೆ ತೆರಳುವ ಮಾರ್ಗದಲ್ಲಿ ಚೆಕ್ ಪೋಸ್ಟ್ ಮಾಡಲಾಗುತ್ತದೆ. ಅಲ್ಲಿ ಪರಿಶೀಲನೆ ಮಾಡಿ ಬಿಡಲಾಗುತ್ತದೆ ಎಂದು ತಿಳಿಸಿದ್ದಾರೆ. ಅಕ್ಟೋಬರ್ 17 ರಂದು ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ಮಕರ ಲಗ್ನದಲ್ಲಿ ಕೊಡಗಿನ ತಲಕಾವೇರಿಯಲ್ಲಿರುವ ತೀರ್ಥ ಕುಂಡಿಕೆಯಿಂದ ತಾಯಿ ಕಾವೇರಿ ಮಾತೆ ತೀರ್ಥ ರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ.
ಇದನ್ನೂ ಓದಿ: ಅ.17ಕ್ಕೆ ನಾಡಿನ ಜೀವನದಿ ತಲಕಾವೇರಿಯಲ್ಲಿ ತೀರ್ಥೋದ್ಭವ