ಕೊಡಗು: ಕಾಫಿತೋಟದಲ್ಲಿ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಠಿಸಿದ್ದ ಹುಲಿ ಕೊನೆಗೂ ಸೆರೆಯಾಗಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರದ ಬಳಿ 12 ವರ್ಷದ ಗಂಡು ಹುಲಿ ಸೆರೆ ಸಿಕ್ಕಿದೆ. ಹುಲಿಸೆರೆಯಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಸೆರೆಯಾದ ಹುಲಿ ಅನಾರೋಗ್ಯ ದಿಂದ ಬಳಲುತ್ತಿರುವುದು ತಿಳಿದು ಬಂದಿದೆ.
ಹುಲಿ ಸೆರೆಯಿಂದ ನಿಟ್ಟುಸಿರು ಬಿಟ್ಟ ಜನ:ಸಾಕಾನೆಗಳ ಸಹಾಯದಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸೆರೆ ಹಿಡಿದು ಚಿಕಿತ್ಸೆಗಾಗಿ ಮೈಸೂರಿನ ಮೃಗಾಲಯಕ್ಕೆ ರವಾನಿಸಿದ್ದಾರೆ. ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮದಲ್ಲಿ ಹುಲಿ ಹಲವಾರು ದಿನಗಳಿಂದ ಕಾಫಿ ತೋಟದಲ್ಲಿ ಸಂಚಾರ ಮಾಡುತ್ತ ಹಸು ಮತ್ತು ಇತರ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿತ್ತು. ಕಾಫಿ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ಮಾಲೀಕರು ಕಾಫಿ ತೋಟಕ್ಕೆ ಹೋಗಲು, ರಸ್ತೆಯಲ್ಲಿ ಸಂಚಾರ ಮಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿತ್ತು. ಈಗ ಹುಲಿ ಸೆರೆಯಾಗಿದ್ದು ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಸಿದ್ದಾಪುರ ಸಮೀಪದ ಘಟ್ಟದಳ್ಳ ಚೇಂದಂಡ ನಂದಾ ಮಾದಪ್ಪ ಎಂಬುವವರಿಗೆ ಸೇರಿದ್ದ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿತ್ತು. ಇದಾದ ಮಾರನೇ ದಿನ ಮಾಲ್ದಾರೆ ಸಮೀಪದ ಅಸ್ತಾನದಲ್ಲಿ ಹುಲಿ ಪ್ರತ್ಯಕ್ಷವಾಗಿರುವುದನ್ನು ಕಂಡ ಕೂಲಿ ಕಾರ್ಮಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು, ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಆರು ಸಾಕಾನೆಗಳ ಸಹಾಯದೊಂದಿಗೆ ಹುಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
50ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಗಳು ನಡೆಸಿದ ಕಾರ್ಯಾಚರಣೆ: ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಮುಂಜಾನೆಯಿಂದ ಸಾಕಾನೆಗಳ ಸಹಾಯದಿಂದ 50ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಗಳು ನಡೆಸಿದ್ದರು. ಸಾಕಾನೆಗಳಾದ ಹರ್ಷ, ವಿಕ್ರಂ, ಪ್ರಶಾಂತ, ಸುಗ್ರೀವ, ಈಶ್ವರ, ಶ್ರೀರಾಮ ಸಹಕಾರದೊಂದಿಗೆ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು. ಕಾಫಿ ತೋಟದಲ್ಲಿ ಕಾರ್ಯಾಚರಣೆ ಮಾಡಿದ ಸಿಬ್ಬಂದಿ ಹುಲಿಯನ್ನು ನೋಡಿದ್ದಾರೆ. ಆದರೆ, ಅನಾರೋಗ್ಯ ದಿಂದ ಬಳಲುತ್ತಿದ್ದ ಹುಲಿ ಒಂದೇ ಜಾಗದಲ್ಲಿ ಕುಳಿತ್ತಿದ್ದರಿಂದ ವನ್ಯಜೀವಿ ವೈದ್ಯಾಧಿಕಾರಿ ಡಾ. ರಮೇಶ್ ಹಾಗೂ ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ರಂಜನ್ ಹುಲಿಗೆ ಅರಿವಳಿಕೆ ಚುಚ್ಚುಮದ್ದು ನೀಡಿದ್ದಾರೆ.
ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಹುಲಿ ಸ್ಥಳಾಂತರ: ಈ ವೇಳೆ, ಗಾಬರಿಗೊಂಡ ಹುಲಿ ಸ್ಥಳದಿಂದ ಕಾಫಿತೋಟದ ಒಳಗೆ ಓಡಿದೆ ಬಳಿಕ ಅಸ್ತಾನ ಗ್ರಾಮದ ಬಳಿ ನಿತ್ರಾಣಗೊಂಡು ಬಿದ್ದಿದೆ, ಈ ವೇಳೆ ಬಲೆ ಹಾಕಿ ಹಿಡಿದು ಹುಲಿಯನ್ನು ಬೋನಿಗೆ ಹಾಕಲಾಗಿದೆ. ಹುಲಿಯ ಹಲ್ಲು ಹಾಗೂ ಕಾಲಿನ ಭಾಗದಲ್ಲಿ ಗಾಯಗಳಾಗಿದ್ದು, ಹುಲಿ ಆಹಾರ ಸೇವನೆ ಮಾಡದೇ ಇದ್ದುದ್ದರಿಂದ ಆಯಾಸಗೊಂಡಿದೆ. ವನ್ಯಜೀವಿ ವೈದ್ಯಾಧಿಕಾರಿ ಡಾ. ಚಿಟ್ಟಿಯಪ್ಪ ಹಾಗೂ ಡಾ. ರಮೇಶ್ ಹುಲಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ. ಹೆಚ್ಚಿನ ಆರೈಕೆಗಾಗಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದೆ.
ಕೊಡಗು ಭಾಗದಲ್ಲಿ ಕಾಡು ಪ್ರಾಣಿಗಳು ಮತ್ತು ಮಾನವ ಸಂಘರ್ಷ ಹೆಚ್ಚಾಗಿದೆ. ಕಾಡು ಪ್ರಾಣಿಗಳು ಆಹಾರ ಅರಸಿ ಬಂದು ಮನುಷ್ಯರ ಮೇಲೆ ದಾಳಿ ಮಾಡಿತ್ತಿವೆ. ಈ ವೇಳೆ ಕೆಲವು ಕಾಡು ಪ್ರಾಣಿಗಳು ನಾಡಿಗೆ ಬಂದು ತಮ್ಮ ಪ್ರಾಣಕ್ಕೆ ಸಂಚಕಾರ ತಂದು ಕೊಳ್ಳುತ್ತಿವೆ. ಕಾಡು ಪ್ರಾಣಿಗಳ ಕಾಡಿನಿಂದ ನಾಡಿಗೆ ಬರುವುದನ್ನು ತಡೆಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ:ಮಡಿಕೇರಿ.. ಕಾರ್ಯಾಚರಣೆ ವೇಳೆ 35 ಅಡಿ ಗುಂಡಿಗೆ ಬಿದ್ದು ಕಾಡಾನೆ ಸಾವು