ಕೊಡಗು: ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಸೋಮವಾರ ಪೇಟೆ ತಾಲೂಕಿನ ಕುಶಾಲನಗರದಲ್ಲಿ ನಡೆದಿದೆ.
ಸ್ನೇಹಿತನ ಮನೆಯ ರಂಜಾನ್ ಹಬ್ಬದ ಊಟಕ್ಕೆ ಹೋಗಿದ್ದ ಮೂವರು ಸ್ನೇಹಿತರು ನೀರಲ್ಲಿ ಈಜಾಡಿ ಮಸ್ತಿ ಮಾಡೋಣವೆಂದು ಹೋಗಿ ಮುಖ ಮಾಡಿದ್ದು ಮಾತ್ರ ಬೇರೆ ಕಡೆಗೆ. ಹೀಗೆ ನೀರಿನ ಕಡೆ ಮುಖ ಮಾಡಿದವರು ಕೊನೆಗೆ ಮೇಲೆ ಮುಖ ಮಾಡಲೇ ಇಲ್ಲ. ನೋಡು ನೋಡುತ್ತಲೇ ರಂಜಾನ್ ಸಡಗರ ಸಂಭ್ರಮ ಮಾಯವಾಗಿತ್ತು.
ಶಶಾಂಕ್, ಗಗನ್ ಹಾಗೂ ಆಕಾಶ್ ಮೃತರು. ಇವರೆಲ್ಲ ಜ್ಯೂನಿಯರ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಇಂದು ಕಾಲೇಜಿಗೆ ರಜೆ ಇದ್ದ ಕಾರಣ ಮೂವರು ಹಬ್ಬದ ಬಿರಿಯಾನಿ ಸವಿಯಲು ಸುಂಟಿಕೊಪ್ಪದ ಮನ್ಸೂರ್ ಎಂಬ ಗೆಳೆಯ ಮನೆಗೆ ಬಂದಿದ್ದರು. ಬಿರಿಯಾನಿಯನ್ನ ತಿಂದ ಇವರಿಗೆ ಹತ್ತಿರದಲ್ಲೇ ಕಾವೇರಿ ನದಿ ಇರೋದು ಗೊತ್ತಾಗಿ, ಒಂದು ರೌಂಡ್ ಹೋಗಿ ಈಜಿ ಬರೋಣ ಅಂತಾ ಸುಂಟಿಕೊಪ್ಪದಿಂದ ಕುಶಾಲನಗರಕ್ಕೆ ಬಂದಿದ್ದಾರೆ. ಕಾವೇರಿ ನದಿ ತೀರಕ್ಕೆ ಬಂದು ಬಿಸಿಲಿನ ಧಗೆಯಲ್ಲಿ ತಣ್ಣನೆ ನೀರಿಗೆ ಶಶಾಂಕ್, ಆಕಾಶ್, ಗಗನ್ ಇಳಿದಿದ್ದಾರೆ. ಆದರೆ, ನೀರಿಗೆ ಇಳಿದ ಒಂದೆರಡು ನಿಮಿಷದಲ್ಲೇ ಈಜು ಬಾರದೇ ಶಶಾಂಕ್ ನೀರಿನಲ್ಲಿ ಮುಳುಗಿ, ರಕ್ಷಣೆಗಾಗಿ ಕಿರುಚಿಕೊಂಡಿದ್ದಾನೆ. ಈ ವೇಳೆ ಪಕ್ಕದಲ್ಲೇ ಇದ್ದ ಇಬ್ಬರು ಸ್ನೇಹಿತರು ಶಶಾಂಕ್ನ ರಕ್ಷಣೆಗೆ ಓಡಿ ಹೋಗಿದ್ದಾರೆ. ಆದರೆ, ಶಶಾಂಕ್ ಇಬ್ಬರು ಸ್ನೇಹಿತರನ್ನ ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ ಮೂವರು ನೀರಿನಲ್ಲೇ ಮುಳಗಿ ಸಾವನ್ನಪ್ಪಿದ್ದಾರೆ.
ಮೂವರು ಮುಳುಗೋದನ್ನ ನೋಡಿದ ಕೆಲ ಪ್ರವಾಸಿಗರು, ಸ್ಥಳೀಯರು ಓಡಿ ಮೂವರನ್ನ ಬದುಕಿಸೋ ಪ್ರಯತ್ನ ಮಾಡಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಮೂವರ ಪ್ರಾಣಪಕ್ಷಿ ಹಾರಿಹೋಗಿತ್ತು. ತಮ್ಮ ಮಕ್ಕಳು ನೀರುಪಾಲಾಗಿದ್ದಾರೆ ಅನ್ನೋ ಸುದ್ದಿ ತಿಳಿದ ಪೋಷಕರು ಮಡಿಕೇರಿಯಿಂದ ಓಡೋಡಿ ಬಂದು ಎದೆ ಎತ್ತರಕ್ಕೆ ಬೆಳೆದಿದ್ದ ಮಕ್ಕಳು ತಮ್ಮ ಕಣ್ಮುಂದೆ ಶವವಾಗಿ ಮಲಗಿರೋದನ್ನ ಕಂಡು ಮಮ್ಮುಲ ಮರುಗಿದರು.
ಗೆಳೆಯನ ಮನೆಗೆ ರಂಜಾನ್ ಹಬ್ಬದ ಬಿರಿಯಾನಿ ತಿನ್ನಲು ಬಂದು ಜೀವವನ್ನೇ ತೆಗೆದುಕೊಂಡ ಹುಡುಗಾಟದ ಹುಡುಗರನ್ನ ನೋಡಿ ನೆರೆದಿದ್ದ ಜನರು ಅಕ್ಷರಶಃ ಬೆಚ್ಚಿ ಬಿದ್ದಿದ್ರು. ಅದೇನೆ ಇರಲಿ ಬಾಳಿ ಬದುಕಿ ಹೆತ್ತವರಿಗೆ ಜೀವನದ ಸಂಧ್ಯಾಕಾಲದಲ್ಲಿ ಹೆಗಲಗಬೇಕಿದ್ದ ಮೂವರು, ಎಲ್ಲರಿಗಿಂತ ಮೊದಲೇ ಸುಂದರ ಜೀವನಕ್ಕೆ ಬೆನ್ನು ಹಾಕಿದ್ದು ಮಾತ್ರ ನಿಜಕ್ಕೂ ದುರಂತ.