ಕುಶಾಲನಗರ (ಕೊಡಗು): ಕೌಟುಂಬಿಕ ಕಲಹದಿಂದ ಮಹಿಳೆಯೊಬ್ಬರು ಮೂವರು ಮಕ್ಕಳೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಮನ ಕಲಕುವ ಘಟನೆ ಕುಶಾಲನಗರ ಸಮೀಪದ ಅರಗಲ್ಲು ಗ್ರಾಮದ ಕಾಲುವೆಯಲ್ಲಿ ನಡೆದಿದೆ.
ತೊರೆನೂರಿನ ದೊಡ್ಡಕಾಲುವೆ ಬಳಿ ದುರ್ಘಟನೆ ನಡೆದಿದ್ದು, ಮೃತರನ್ನು ಚಿತ್ರದುರ್ಗ ಮೂಲದ ಕೂಲಿ ಕಾರ್ಮಿಕರ ಮಕ್ಕಳಾದ ವಿನಯ್, ವಿಜಯ್ ಹಾಗೂ ದೀಕ್ಷಾ ಎನ್ನಲಾಗಿದೆ. ತಾಯಿ ಚೆನ್ನಮ್ಮ(28) ಮೃತದೇಹ ಪತ್ತೆಯಾಗಿಲ್ಲ. ಎರಡು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗುವಿನ ಮೃತದೇಹಗಳು ತೇಲಿ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಶವಗಳನ್ನು ಮೇಲೆಕ್ಕೆ ಎತ್ತಿದ್ದಾರೆ.
ಚಿತ್ರದುರ್ಗ ಜಿಲ್ಲೆಯಿಂದ ಕೂಲಿ ಕೆಲಸಕ್ಕೆ ಬಂದಿದ್ದ ಇವರು ಹೆಬ್ಬಾಲೆ ಬಳಿ ಶುಂಠಿ ಕೀಳಲು ಟೆಂಟ್ ಹಾಕಿಕೊಂಡಿದ್ದರು. ಕೌಟುಂಬಿಕ ಕಲಹ ಹಿನ್ನೆಲೆ ಬೇಸತ್ತ ಮಹಿಳೆ ತನ್ನ ಮಕ್ಕಳೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.