ಕೊಡಗು: ಕಳ್ಳರ ತಂಡವೊಂದು ಸಿನಿಮೀಯ ರೀತಿಯಲ್ಲಿ ನಿವೃತ್ತ ನೌಕರರೊಬ್ಬರನ್ನು ಯಾಮಾರಿಸಿ 3 ಲಕ್ಷ ರೂ. ಲಪಟಾಯಿಸಿ ಪರಾರಿಯಾಗಿರುವ ಘಟನೆ ಕುಶಾಲನಗರದ ಎಸ್.ಬಿ.ಐ ಬ್ಯಾಂಕ್ ಬಳಿ ನಡೆದಿದೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಮುತ್ತಿನ ಮಳ್ಳುಸೋಗೆ ಗ್ರಾಮದ ಶಿವಕುಮಾರ್ ನಾಯಕ್ ವಂಚನೆಗೆ ಒಳಗಾದ ವ್ಯಕ್ತಿ. ಮಡಿಕೇರಿಯ ಉದ್ಯೋಗ ವಿನಿಮಯ ಕಚೇರಿಯ ನಿವೃತ್ತ ನೌಕರ ಶಿವಕುಮಾರ್ ನಾಯಕ್ ನಾಲ್ಕು ತಿಂಗಳ ಹಿಂದಷ್ಟೇ ನಿವೃತ್ತಿ ಹೊಂದಿದ್ದರು. ಮಗನ ಮದುವೆಗೆ ಮಾಡಿದ್ದ ಸಾಲ ತೀರಿಸಲು ಕುಶಾಲನಗರದ ಎಸ್.ಬಿ. ಐ ಬ್ಯಾಂಕ್ ನಿಂದ ಹಣ ಡ್ರಾ ಮಾಡಲು ಬಂದಿದ್ದರು ಎನ್ನಲಾಗಿದೆ.
ಹಣ ತೆಗೆದುಕೊಳ್ಳುವುದನ್ನು ಗಮನಿಸಿದ್ದ ಮೂವರು ಖದೀಮರು ಬ್ಯಾಂಕ್ ಮುಂದೆ ಶಿವಕುಮಾರ್ ನಿಲ್ಲಿಸಿದ್ದ ಬೈಕ್ ಟಯರ್ ಪಂಚರ್ ಮಾಡಿದ್ದಾರೆ. ಹಣ ಡ್ರಾ ಮಾಡಿ ಹೊರ ಬಂದ ಅವರಿಗೆ ಸರ್ ನಿಮ್ಮ ಬೈಕ್ ಪಂಚರ್ ಆಗಿದೆ ನೋಡಿ ಅಂದಿದ್ದಾರೆ. ಖದೀಮರ ಸಂಚನ್ನು ಅರಿಯದ ಶಿವಕುಮಾರ್ ಸಮೀಪವೇ ಇದ್ದ ಪಂಚರ್ ಅಂಗಡಿಗೆ ಬೈಕ್ ತಳ್ಳಿಕೊಂಡು ಹೋಗಿದ್ದಾರೆ. ಅಂಗಡಿ ಒಳಗೆ ಹೋಗಿ ಬರುವಷ್ಟರೊಳಗೆ ಬೈಕಿನಲ್ಲೇ ಇರಿಸಿದ್ದ ಹಣವನ್ನು ಕದ್ದು ಪಾರಾರಿಯಾಗಿದ್ದಾರೆ. ಕಳ್ಳರ ಕೈ ಚಳಕದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.