ಕೊಡಗು: ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದ ರೋಗಿಯೊಬ್ಬರ ಹೊಟ್ಟೆಯಲ್ಲಿ ಬರೋಬ್ಬರಿ ಒಂದೂವರೆ ಕೆ.ಜಿ ಕೂದಲು ಪತ್ತೆಯಾಗಿದೆ.
ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಗೆ ದಾಖಲಾಗಿದ್ದರು. ಸ್ಕ್ಯಾನ್ ಮಾಡಿ ನೋಡಿದಾಗ ಹೊಟ್ಟೆಯಲ್ಲಿ ಗಡ್ಡೆ ಇರುವುದು ಪತ್ತೆಯಾಗಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದು ಕೂದಲಿನಂತಹ ವಸ್ತುವಿನಿಂದ ಉಂಟಾಗಿರುವ ಗಡ್ಡೆ ಎಂದು ತಿಳಿದುಬಂದಿದೆ. ಅಲ್ಲದೇ ರೋಗಿಯು ಕೂದಲನ್ನು ಕಿತ್ತು ತಿನ್ನುವ ವಿಚಿತ್ರ ಹಾಗೂ ಅಪರೂಪದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಸಂಗತಿ ಗೊತ್ತಾಗಿದೆ.
ಈ ಹಿನ್ನೆಲೆಯಲ್ಲಿ ಹಲವು ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆ ನಡೆಸಿದ ಡಾ.ಅಜಿತ್ ಕುಮಾರ್ ನೇತೃತ್ವದ ವೈದ್ಯರ ತಂಡ ಒಂದೂವರೆ ಬೃಹತ್ ಗಡ್ಡೆಯನ್ನು ಹೊರತೆಗೆದರು. ಶಸ್ತ್ರಚಿಕಿತ್ಸೆಗೊಳಗಾದ ರೋಗಿಯ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಈ ಶಸ್ತ್ರಚಿಕಿತ್ಸೆಯಲ್ಲಿ ಡಾ.ಅಭಿನಂದನ್, ಡಾ.ಪೊನ್ನಪ್ಪ, ಡಾ.ಪ್ರವೀಣ್ ಕುಮಾರ್, ಡಾ.ತಾರನಂದನ್, ಡಾ. ಪ್ರದೀಪ್ ಪಾಲ್ಗೊಂಡಿದ್ದರು.