ಕೊಡಗು: ಜಿಲ್ಲೆಯಲ್ಲಿ ಭೂ ಮಾಫಿಯಾ ಉಪಟಳ ಮಿತಿಮೀರಿದೆ. ಹಾರಂಗಿ ಜಲಾಶಯದ ಅಚ್ಚುಕಟ್ಟು ಪ್ರದೇಶಗಳಲ್ಲೇ ಲೇಔಟ್ ಮಾಡಲಾಗ್ತಾ ಇದೆ. ಮುಳುಗಡೆ ಪ್ರದೇಶ ಅಂತ ಗೊತ್ತಿದ್ರೂ ಅದಕ್ಕೆ ಸಾವಿರಾರು ಲೋಡ್ ಮಣ್ಣು ಸುರಿದು ಲೇಔಟ್ ಮಾಡಲಾಗ್ತಾ ಇದೆ. ಇದ್ರಿಂದ ಸಮೀಪದ ರೈತರು ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿ ಎದುರಿಸುತ್ತಾ ಇದ್ದಾರೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕೊಡಗು ಗಡಿಭಾಗ ಕೊಪ್ಪದಲ್ಲಿ ಭೂಮಾಫಿಯಾಗಳ ಅಕ್ರಮ ಮಿತಿ ಮೀರಿದೆ. ಕೊಪ್ಪ ಮತ್ತು ಆವರ್ತಿ ಗ್ರಾಮದಲ್ಲಿ ಕಾವೇರಿ ನದಿಯಿಂದ ಕೇವಲ 500 ರಿಂದ 700 ಮೀಟರ್ ದೂರದಲ್ಲಿ ಹಳ್ಳ, ತಗ್ಗು ಪ್ರದೇಶಗಳಿಗೆ ನಿತ್ಯ ಸಾವಿರಾರು ಲೋಡ್ ಮಣ್ಣು ತುಂಬಿಸಲಾಗ್ತಾ ಇದೆ. ಸರ್ವೆ ನಂಬರ್ 23/1, 24/1 ಮೂಲತಃ ಕೃಷಿ ಭೂಮಿಯಾಗಿದ್ದು, ಇದರ 14 ಎಕರೆ ಜಾಗದಲ್ಲಿ ಲೇಔಟ್ ಮಾಡಲಾಗ್ತಾ ಇದೆ.
ಮಡಿಕೇರಿ - ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಆರ್.ಕೆ ಡೆವಲಪರ್ಸ್ ಈ ಲೇಔಟ್ ನಿರ್ಮಿಸ್ತಾ ಇದೆ. ಆದರೆ ಪ್ರತಿವರ್ಷ ಮಳೆಗಾಲದಲ್ಲಿ ಈ ಭೂಮಿ ಕಾವೇರಿ ನದಿಯ ಪ್ರವಾಹದಿಂದ ಮುಳುಗಡೆಯಾಗುತ್ತಿದೆ.
ಇದೀಗ ಈ ಮುಳಗಡೆ ಪ್ರದೇಶಕ್ಕೆ ಸಹಸ್ರಾರು ಲೋಡ್ ಮಣ್ಣು ತುಂಬಿದ್ರೆ ಪ್ರವಾಹದ ನೀರು ಸಮೀಪದ ರೈತರ ಜಮೀನುಗಳಿಗೆ ನುಗ್ಗಿ ಭಾರೀ ನಷ್ಟವಾಗಲಿದೆ ಅನ್ನೋದು ರೈತರ ಆತಂಕವಾಗಿದೆ. ಅಲ್ಲದೇ ಇಲ್ಲಿನ ಪ್ರವಾಹದ ಬಗ್ಗೆ ಅರಿವಿಲ್ಲದ ಗ್ರಾಹಕರು ಕೋಟಿ ರೂ. ತೆತ್ತು ಇಲ್ಲಿ ಸೈಟ್ ಖರೀದಿ ಮಾಡಿ ಮನೆ ನಿರ್ಮಾಣ ಮಾಡ್ತಾರೆ.
ಆದರೆ ಮಳೆಗಾಲದಲ್ಲಿ ಈ ಸೈಟ್ಗಳು ಸಂಪೂರ್ಣ ಮುಳಗಡೆಯಾಗ್ತವೆ. ಈ ಪ್ರವಾಹದ ಬಗ್ಗೆ ಭೂ ಮಾಲೀಕರು ಗ್ರಾಹಕರಿಗೂ ಮಾಹಿತಿ ನೀಡಿಲ್ಲ ಅನ್ನೋದು ಸ್ಥಳೀಯರ ಆರೋಪ. 20 ಅಡಿ ಮಣ್ಣು ಹಾಕಿದ ನೆಲದಲ್ಲಿ ಮನೆ ಕಟ್ಟಿದ್ರೆ ಪ್ರವಾಹದಲ್ಲಿ ಮುಳುಗಡೆಯಾಗಿ ಒಂದೇ ವರ್ಷದಲ್ಲಿ ಈ ಮನೆಗಳು ಕುಸಿಯಲಿವೆ. ಹಾಗಾಗಿ ಡೆವಲಪರ್ಗಳು ಸೈಟ್ ಖರೀದಿದಾರರಿಗೆ ವಂಚನೆ ಮಾಡ್ತಾ ಇದ್ದಾರೆ ಅನ್ನೋದು ಇಲ್ಲಿನ ಜನರ ಆರೋಪ.
ಹಾರಂಗಿ ಜಲಾಶಯದಿಂದ ಪ್ರತಿವರ್ಷ ನೀರು ಹೊರ ಬಿಟ್ಟಾಗ ಅದರ ಅಚ್ಚುಕಟ್ಟು ಪ್ರದೇಶದ ಸಾವಿರಾರು ಎಕರೆ ಜಮೀನು ಮುಳಗಡೆಯಾಗ್ತಾ ಇದೆ. ಈ ಪ್ರದೇಶದಲ್ಲಿ ಯಾವುದೇ ಕಟ್ಟಡಗಳನ್ನು ಕಟ್ಟುವಂತಿಲ್ಲ ಅನ್ನೋ ಕಾನೂನೇ ಇದೆ.
ಆದ್ರೆ ಖಾಸಗಿ ಡೆವಲಪರ್ಗಳು ಇದೇ ಭೂಮಿಯಲ್ಲಿ ಲೇಔಟ್ಗಳನ್ನು ಮಾಡ್ತಾ ಇದ್ದಾರೆ. ಹಾಗಾಗಿ ಜಿಲ್ಲಾಡಳಿತ ತಕ್ಷಣವೇ ಮಧ್ಯ ಪ್ರವೇಶಿಸಿ ಲೇಔಟ್ ನಿರ್ಮಾನ ತಡೆಯಬೇಕು ಎಂದು ರೈತರು ಆಗ್ರಹಿಸಿದ್ದಾರೆ.