ಕೊಡಗು: ಜಿಲ್ಲೆಯಲ್ಲಿ ಭಾರೀ ಮಳೆ ಮುನ್ಸೂಚನೆ ಹಿನ್ನಲೆ ಕೇಂದ್ರ ಹವಾಮಾನ ಇಲಾಖೆ ವರದಿಯನ್ನು ಆಧರಿಸಿ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ಹೇಳಿದ್ದಾರೆ.
ಇಂದಿನಿಂದ 23 ರವರೆಗೆ ಜಿಲ್ಲೆಯಲ್ಲಿ ಭಾರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ. ಈ ಕುರಿತಾಗಿ ಜಿಲ್ಲೆಯ ಜನತೆ ಹಾಗೂ ಪ್ರವಾಸಿಗರು ಎಚ್ಚರದಿಂದ ಇರಬೇಕು. ಯಾವುದೇ ಸಮಸ್ಯೆಗಳು ಎದುರಾದರೆ ತುರ್ತು ಟೋಲ್ ಸಹಾಯವಾಣಿ ಸಂಖ್ಯೆ 08272 - 221077 ಸಂಪರ್ಕಿಸ ಬೇಕು ಎಂದು ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಸಾಧಾರಣ ಪ್ರಮಾಣದ ಮಳೆಯಾಗುತ್ತಿದೆ. ಏನಾದರೂ ಪ್ರಕೃತಿ ವಿಕೋಪಗಳು ಎದುರಾದರೆ ಅದನ್ನು ನಿಭಾಯಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಈಗಾಗಲೇ ಎನ್ಡಿಆರ್ಎಫ್ ತಂಡ ಜಿಲ್ಲೆಯಲ್ಲಿಯೇ ವಾಸ್ತವ್ಯ ಹೂಡಿದ್ದು, ಜೊತೆಗೆ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಒಳಗೊಂಡತೆ ಎಲ್ಲಾ ತಂಡಗಳು ಸನ್ನದ್ಧವಾಗಿವೆ. ಪ್ರತಿ ಗಂಟೆಗೆ ಎಲ್ಲಾ ಇಲಾಖೆಗಳಿಂದ ವರದಿ ತರಿಸಿಕೊಳ್ಳುತ್ತಿದ್ದೇವೆ. ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಮಳೆಗೆ ಸಂಬಂಧಿಸಿದ ಸಮಸ್ಯೆಗಳು ವರದಿಯಾಗಿಲ್ಲ. ಜಿಲ್ಲೆಯ ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ.