ಶನಿವಾರಸಂತೆ/ಕೊಡಗು: ಮಾಲಂಬಿ ರಕ್ಷಿತ ಅರಣ್ಯದಲ್ಲಿ ಅಪರೂಪದ 6 ತಿಂಗಳ ಮಲಬಾರ್ ಪುನುಗು ಬೆಕ್ಕನ್ನು ಗುಂಡು ಹೊಡೆದು ಕೊಂದು ಕೊಂಡೊಯ್ಯುತ್ತಿದ್ದ ಇಬ್ಬರು ಆರೋಪಿಗಳನ್ನು ವಲಯ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿತ್ತಲಕೇರಿ ಗ್ರಾಮದ ಹೆಚ್.ಎಸ್.ಲೋಹಿತ್ ಹಾಗೂ ಹೆಚ್.ಆರ್.ಸುರೇಶ್ ಬಂಧಿತರು. ಪುನುಗು ಬೆಕ್ಕನ್ನು ಬೇಟೆಯಾಡಿ ಮನೆಗೆ ಕೊಂಡೊಯ್ಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ರಾತ್ರಿ ಗಸ್ತಿನಲ್ಲಿದ್ದ ವಲಯ ಅರಣ್ಯಾಧಿಕಾರಿ ಕೆ.ಕೊಟ್ರೇಶ್ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಸ್ಥಳದಲ್ಲಿದ್ದ ಬೇಟೆಯಾಡಿದ್ದ ಪುನುಗು ಬೆಕ್ಕು, ಕೋವಿ, 1 ಟಾರ್ಚ್ ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಶನಿವಾರಸಂತೆ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.