ಕೊಡಗು: ಪೌರತ್ವ ತಿದ್ದುಪಡಿ ಕಾಯ್ದೆಯ ಕಿಚ್ಚು ಮಂಜಿನ ನಗರಿ ಮಡಿಕೇರಿಯಲ್ಲೂ ಜೋರಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಪ್ರತಿಭಟನಾನಿರತರು ಕೇಂದ್ರ ಸರ್ಕಾರ ಸಿಎಎ ಹಾಗೂ ಎನ್‌ಆರ್‌ಸಿಯಂತಹ ಕರಾಳ ಕಾಯ್ದೆ ಜಾರಿಗೆ ತಂದಿದೆ ಎಂದು ಒಕ್ಕೊರಲಿನಿಂದ ವಿರೋಧಿಸಿದರು.
ಜಿಲ್ಲಾ ಜಮಾತ್ ಒಕ್ಕೂಟದ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಸಮುದಾಯದ ಧಾರ್ಮಿಕ ಮುಖಂಡರ ಧಾರ್ಮಿಕ ಪ್ರವಚನದೊಂದಿಗೆ ಸಮಾವೇಶ ಪ್ರಾರಂಭಿಸಲಾಯಿತು. ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 4 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಜಮಾಯಿಸಿದ್ದರು. ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಗೋಲಿಬಾರ್ ಘಟನೆಯನ್ನು ತೀವ್ರವಾಗಿ ಖಂಡಿಸಿದರು.
ದೇಶದಲ್ಲಿ ಹೊಸದೊಂದು ಪರ್ವ ಶುರುವಾಗಿದೆ. ಹಲವು ವರ್ಷಗಳು ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರಿಗೇ ದಾಖಲೆ ಕೇಳಲು ಹೊರಟಿದೆ. ಇದನ್ನು ನಾವೆಲ್ಲರೂ ಒಗ್ಗಟ್ಟಿನಿಂದ ತಿರಸ್ಕರಿಸಬೇಕಿದೆ. ಜಾರ್ಖಂಡ್ ನಾಗರಿಕರು ಬಿಜೆಪಿ ಸರ್ಕಾರಕ್ಕೆ ಸರಿಯಾಗಿಯೇ ದಾಖಲೆ ತೋರಿಸಿದ್ದಾರೆ. 1947ರಿಂದ ಇತ್ತೀಚೆಗಿನ ನಮ್ಮೆಲ್ಲರ ದಾಖಲಾತಿಗಳನ್ನು ಸಂಸತ್ತಿಗೆ ಸುರಿದರೆ ನೀವೇ ಮುಚ್ಚಿ ಹೋಗ್ತೀರಾ. ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯ ಸಂಗ್ರಾಮ ಬ್ರಿಟೀಷರ ವಿರುದ್ಧ ನಡೆದಿತ್ತು. ಕೇಂದ್ರ ಸರ್ಕಾರ ಇಂತಹ ಕಾಯ್ದೆ ತರುವ ಮೂಲಕ ದೇಶದಲ್ಲಿ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿ ಹಾಡಲು ಹೊರಟಿದೆ ಎಂದು ಕಿಡಿಕಾರಿದರು.
ಮುನ್ನೆಚ್ಚರಿಕಾ ಉದ್ದೇಶದಿಂದ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಮಡಿಕೇರಿ ನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಚೆಕ್ ಪೋಸ್ಟ್ ನಿರ್ಮಿಸಿ ಮಡಿಕೇರಿ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ ವಾಹನಗಳನ್ನು ತಪಾಸಣೆ ಮಾಡಲಾಗಿತ್ತು. ಮೈಸೂರು, ವಿರಾಜಪೇಟೆ, ಮಂಗಳೂರು ರಸ್ತೆಗಳಲ್ಲಿ ವಾಹನ ತಪಾಸಣೆ ಮಾಡಲಾಗಿತ್ತು. ಮುಸ್ಲಿಂ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದರು.
ಸಮಾವೇಶದಲ್ಲಿ ಮಾಜಿ ಶಾಸಕ ಕೆ.ಎಂ.ಹಿಬ್ರಾಹಿಂ, ಕೊಡಗು ಜಿಲ್ಲಾ ಖಾಜಿ ಮೊಹಮ್ಮದ್ ಮುಸ್ಲಿಯಾರ್, ಮುಖಂಡರಾದ ಖಾಸಿಂ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಬಿ.ಗಣೇಶ್, ಸಾಮಾಜಿಕ ಚಿಂತಕರಾದ ಶಿವ ಸುಂದರ್, ನಜ್ಮಾ ನಜೀರ್ ಚಿಕ್ಕ ನೇರಳೆ ಉಪಸ್ಥಿತರಿದ್ದರು.