ಕೊಡಗು: ಯಾರೇ ಕೈ ಬಿಟ್ಟರು ದೇವರು ಒಬ್ಬ ಇದ್ದಾನೆ ಅವನು ಕೈ ಹಿಡಿತಾನೆ ಎನ್ನುವುದು ಜನರ ಅಪಾರ ನಂಬಿಕೆ. ಆದ್ರೆ ಕೊರೊನಾ ಹರಡದಂತೆ ಲಾಕ್‌ಡೌನ್ ಘೋಷಿಸಿರುವ ಸರ್ಕಾರ ಎಲ್ಲಾ ಧರ್ಮೀಯರ ದೇವಾಲಯಗಳನ್ನು ಇಂದಿಗೂ ತೆರೆಯಲು ಅವಕಾಶ ನೀಡಿಲ್ಲ. ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳನ್ನೇ ನಂಬಿದ್ದ ಸಾವಿರಾರು ಅರ್ಚಕರಿಗೆ ಸಂಕಷ್ಟ ಎದುರಾಗಿದೆ.
ಕನಿಷ್ಠ ಅಗತ್ಯ ವಸ್ತುಗಳನ್ನು ಕೊಳಲು ಪರದಾಡಬೇಕಾದ ಸ್ಥಿತಿಯನ್ನು ಅರ್ಚಕರು ಅನುಭವಿಸುತ್ತಿದ್ದಾರೆ. ಸರ್ಕಾರವೇನೋ ಮುಜರಾಯಿ ಇಲಾಖೆ ದೇವಾಸ್ಥಾನಗಳ ಅರ್ಚಕರು, ಪರಿಚಾರಕರಿಗೆ ಮತ್ತು ಅಲ್ಲಿನ ಸಿಬ್ಬಂದಿಗೆ ಐದು ಸಾವಿರ ಪರಿಹಾರ ಘೋಷಿಸಿದೆ. ಆದರೆ, ಪ್ರತೀ ಜಿಲ್ಲೆಯಲ್ಲಿ ನೋಡಿದರೆ ಬೆರಣೆಳಿಕೆಯಷ್ಟು ಮಾತ್ರವೇ ಮುಜರಾಯಿ ಇಲಾಖೆ ದೇವಾಲಯಗಳು ಇವೆ. ಉಳಿದ ಸಾವಿರಾರು ದೇವಾಲಯಗಳ ಅರ್ಚಕರು ಪೂಜಾರಿಕೆಗೆ ಕೆಲಸವನ್ನೇ ನಂಬಿ ಬದುಕುತ್ತಿದ್ದವರು ಇನ್ನಿಲ್ಲದ ಸಮಸ್ಯೆ ಎದುರಿಸುವಂತಾಗಿದೆ ಎನ್ನೋದು ಅರ್ಚಕರ ಅಳಲು.
ಅದರಲ್ಲೂ ಕೊಡಗು ಜಿಲ್ಲೆಯಲ್ಲಿ ಪೂಜಾರಿಕೆ ವೃತ್ತಿಯಿಂದ ಕೇವಲ ಬೇಸಿಗೆ ಕಾಲದಲ್ಲಿ ಮಾತ್ರವೇ ಸಣ್ಣ ದುಡಿಮೆ ಮಾಡಿಕೊಳ್ಳುತ್ತಿದ್ದೆವು. ಆದರೆ, ಬೇಸಿಗೆ ಪೂರ್ತಿ ಲಾಕ್‌ಡೌನ್ ಆಗಿದ್ದರಿಂದ ದುಡಿಮೇ ಇಲ್ಲದಂತೆ ಆಗಿದೆ. ಇನ್ನು ಮಳೆಗಾಲದ ಆರಂಭವಾದರೆ ಯಾವುದೇ ಶುಭ ಸಮಾರಂಭಗಳು ಆಗುವುದು ಕಡಿಮೆ. ಹೀಗಾಗಿ ನಮ್ಮ ಬದುಕು ಇನ್ನಷ್ಟು ದುಃಸ್ಥಿತಿಗೆ ತಲುಪಲಿದೆ.
ಹೀಗಾಗಿ ಸರ್ಕಾರ ಮುಜರಾಯಿ ಇಲಾಖೆ ದೇವಾಲಯಗಳಿಗೆ ಘೋಷಿಸಿರುವಂತೆ ಉಳಿದ ದೇವಾಲಯಗಳ ಅರ್ಚಕರಿಗೂ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.