ಕೊಡಗು: ''ತಲಕಾವೇರಿ ತೀರ್ಥೋದ್ಭವಕ್ಕೆ ದಿನಗಣನೆ ಆರಂಭವಾಗಿದ್ದು, ಕಳೆದ ತಿಂಗಳ 27ರಿಂದಲೇ ತಲಕಾವೇರಿ ಭಾಗಮಂಡಲದಲ್ಲಿ ವಿಶೇಷ ಪೂಜಾಕೈಂಕರ್ಯಗಳು ಆರಂಭವಾಗಿವೆ. ಇಂದು ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ತಲಕಾವೇರಿ ಭಾಗಂಡಲಕ್ಕೆ ಭೇಟಿ ನೀಡಿ ಅಗತ್ಯ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದರು. ಮೊದಲು ಭಾಗಮಂಡಲದ ಬಂಗಂಡೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಭಗಂಡೇಶ್ವರ ದೇವಾಲಯದಲ್ಲಿ ನಂದಾ ದೀಪ ಬೆಳಗುವ ಹಾಗೂ ಅಕ್ಷಯ ಪಾತ್ರೆಗೆ ಅಕ್ಕಿ ಹಾಕುವ ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದರು. ಈ ನಂದಾ ದೀಪ ಇಂದಿನಿಂದ ಮುಂದಿನ ಒಂದು ತಿಂಗಳವರೆಗೆ ಉರಿಯುತ್ತಿರುತ್ತದೆ. ಅಂದ್ರೆ ಕಿರು ಸಂಕ್ರಮಣದವರೆಗೂ ದೀಪ ಉರಿಸಲಾಗುತ್ತೆ.
''ಈ ಬಾರಿ ತಡರಾತ್ರಿ ತೀರ್ಥೋದ್ಭವ ಆಗುತ್ತಿದ್ದು, ಜಿಲ್ಲಾಡಳಿತ ಹಾಗೂ ಸರ್ಕಾರ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಜಾತ್ರಾ ಮಹೋತ್ಸವ ಸುಸೂತ್ರವಾಗಿ ನಡೆಸಲಾಗುತ್ತದೆ ಎಂದು ಕೊಡಗು ಸಚಿವ ಬೋಸರಾಜು ತಿಳಿಸಿದರು.
ಭಾಗಮಂಡಲ ಭಗಂಡೇಶ್ವರ, ತಲಕಾವೇರಿ ಪವಿತ್ರ ಕ್ಷೇತ್ರದಲ್ಲಿ ಸಿದ್ಧತೆ ಜೋರು: ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಹಿನ್ನೆಲೆ, ಭಾಗಮಂಡಲ ಭಗಂಡೇಶ್ವರ ಮತ್ತು ತಲಕಾವೇರಿ ಪವಿತ್ರ ಕ್ಷೇತ್ರದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಸಚಿವ ಎನ್.ಎಸ್. ಬೋಸರಾಜು, ಶಾಸಕ ಎ.ಎಸ್. ಪೊನ್ನಣ್ಣ ಭಾನುವಾರ ಭಾಗಮಂಡಲ ಭಗಂಡೇಶ್ವರ ದೇವಾಲಯ, ತ್ರಿವೇಣಿ ಸಂಗಮ ಹಾಗೂ ತಲಕಾವೇರಿ ಕೇತ್ರಕ್ಕೆ ಭೇಟಿ ಸಿದ್ಧತೆಗಳನ್ನು ಪರಿಶೀಲಿಸಿದರು.
ಸಾಂಸ್ಕೃತಿಕ ಗೀತಗಾಯನ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಾಣ, ಭಕ್ತಾಧಿಗಳ ಅನುಕೂಲಕ್ಕಾಗಿ ಬ್ಯಾರಿಕೇಡ್ ನಿರ್ಮಾಣ, ಅಗತ್ಯ ವ್ಯವಸ್ಥೆಗ ಸೇರಿದಂತೆ ಮತ್ತಿತರ ಸಿದ್ಧತೆಗಳ ಬಗ್ಗೆ ಸಚಿವರಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾಹಿತಿ ನೀಡಿದರು. ''ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಸಂಬಂಧ ಒಂದು ತಿಂಗಳಿನಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭಕ್ತಾಧಿಗಳಿಗೆ ಅಗತ್ಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ. ವಾಹನ ನಿಲುಗಡೆ, ಸಂಚಾರಕ್ಕೆ ಪೂರಕವಾಗಿ ಬಸ್ ಸೌಲಭ್ಯ ಕಲ್ಪಿಸಲಾಗಿದೆ'' ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್. ಎಸ್. ಬೋಸರಾಜು ತಿಳಿಸಿದ್ದಾರೆ.
''ಹಿಂದಿನಂತೆ ಅನ್ನದಾನ ನಡೆಯಲಿದೆ. ಭಕ್ತಾಧಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವೈದ್ಯರು ಮತ್ತು ಶ್ರುಶ್ರೂಷಕರ ನಿಯೋಜನೆ, ಅಂಬ್ಯುಲೆನ್ಸ್ ಸೌಲಭ್ಯ ಕಲ್ಪಿಸಲಾಗುತ್ತದೆ. ಭಕ್ತಾಧಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಗಮನಹರಿಸಲಾಗುವುದು'' ಎಂದರು.
ಪೊಲೀಸ್ ಬಂದೋಬಸ್ತ್: ''ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, 2- ಡಿವೈಎಸ್‍ಪಿ, 9- ಪೊಲೀಸ್ ಇನ್ಸ್ಪೆಕ್ಟರ್, 15- ಸಬ್ ಇನ್ಸ್ಪೆಕ್ಟರ್, 30- ಸಹಾಯಕ ಸಬ್ ಇನ್ಸ್ಪೆಕ್ಟರ್, 350 ಹೆಡ್ಕಾನ್ಸ್ಟೇಬಲ್ ಹಾಗೂ ಅಗತ್ಯ ಪೊಲೀಸ್ ಸಿಬ್ಬಂದಿಗಳ ಜೊತೆಗೆ ಗೃಹ ರಕ್ಷಕ ದಳದವರು ಕರ್ತವ್ಯ ನಿರ್ವಹಿಸಲಿದ್ದಾರೆ'' ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ಮಾಹಿತಿ ನೀಡಿದ್ದಾರೆ.
''ಭಾಗಮಂಡಲದಿಂದ- ತಲಕಾವೇರಿ, ತಲಕಾವೇರಿ- ಭಾಗಮಂಡಲ ಮಾರ್ಗದಲ್ಲಿ 20 ಬಸ್‍ಗಳು ಸಂಚರಿಸಲಿವೆ. ಜನದಟ್ಟಣೆ ನೋಡಿಕೊಂಡು ಮಡಿಕೇರಿ- ಭಾಗಮಂಡಲ, ಭಾಗಮಂಡಲ-ಮಡಿಕೇರಿ ಮಾರ್ಗ ಬಸ್‍ಗಳು ಸಂಚರಿಸಲಿವೆ'' ಎಂದು ಕೆಎಸ್ಆರ್ಟಿಸಿ ಡಿಪೋ ವ್ಯವಸ್ಥಾಪಕ ಮೆಹಬೂಬ ಆಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಮೈಸೂರು ಕಲೆ, ಸಂಸ್ಕೃತಿ, ಸಾಹಿತ್ಯಕ್ಕೆ ಹೆಸರುವಾಸಿ: ಸಿಎಂ ಸಿದ್ದರಾಮಯ್ಯ