ಕೊಡಗು: ಕಳೆದ ಕೆಲವು ದಿನಗಳಿಂದ ಹುಲಿ ದಾಳಿ ಹೆಚ್ಚಾಗಿರುವ ಪರಿಣಾಮ ಜಿಲ್ಲೆಯ ಜನತೆ ಭಯದಲ್ಲಿಯೇ ಜೀವನ ಸಾಗಿಸುವಂತಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಯ ಸಿಬ್ಬಂದಿಗೆ ದೂರು ನೀಡಿದ್ರೂ, ಹುಲಿ ಹಿಡಿಯುವ ಕಾರ್ಯ ಮಾತ್ರ ನಡೆದಿಲ್ಲ. ಹೀಗಾಗಿ ಆಕ್ರೋಶಗೊಂಡಿರುವ ಜನರು ಪೊನ್ನಂಪೇಟೆ ತಾಲೂಕು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 15 ದಿನಗಳಲ್ಲಿ ಸುಮಾರು 15ಕ್ಕೂ ಹೆಚ್ಚು ಜಾನುವಾರು ಹಾಗೂ ಮೂವರು ವ್ಯಕ್ತಿಗಳನ್ನು ಬಲಿ ಪಡೆದಿರುವ ಹುಲಿಯನ್ನು ಸೆರೆಹಿಡಿಯಲೇಬೇಕೆಂದು ರೈತಸಂಘ ಒತ್ತಾಯಿಸಿದೆ. ಇಂದು ಮುಂಜಾನೆ 6 ರಿಂದ ಮಧ್ಯಾಹ್ನ 12 ಗಂಟೆವರೆಗೆ ಪೊನ್ನಂಪೇಟೆ ತಾಲೂಕು ಬಂದ್ ಮಾಡಿ ಅರಣ್ಯ ಇಲಾಖೆಯ ವಿರುದ್ದ ಪ್ರತಿಭಟನೆ ನಡೆಸಲಾಯಿತು.
ಓದಿ: ಈಶ್ವರವನದಲ್ಲಿ 'ಮಹಾಶಿವರಾತ್ರಿ' ವೈಭವ: ಪ್ರಕೃತಿ ಸಂರಕ್ಷಣೆಯ ಜಾಗೃತಿ
ಅರಣ್ಯ ಇಲಾಖೆ ಕಳೆದ ಎರಡು ವಾರಗಳಿಂದ ಹುಲಿ ಕಾರ್ಯಾಚರಣೆ ನಡೆಸುತ್ತಿದೆ. ಆದರೂ ವ್ಯಾಘ್ರನ ಸುಳಿವು ಮಾತ್ರ ಕಂಡು ಬರ್ತಾ ಇಲ್ಲ. ಸುಮಾರು 150 ಸಿಬ್ಬಂದಿ, ನಾಲ್ಕಾರು ಆನೆಗಳು, ಶಾರ್ಪ್ ಶೂಟರ್ಗಳನ್ನು ಒಳಗೊಂಡ ತಂಡದಿಂದ ಹಗಲು ರಾತ್ರಿ ಕಾರ್ಯಾಚರಣೆ ಮಾಡಿದ್ರೂ, ಹುಲಿ ಇಲಾಖೆಯ ಸಿಬ್ಬಂದಿ ಕಣ್ಣಿಗೆ ಬಿದ್ದಿಲ್ಲ. ಹೀಗಾಗಿ, ಸಾರ್ವಜನಿಕರು ತಾಳ್ಮೆ ಕಳೆದುಕೊಂಡಿದ್ದು, ನರಹಂತಕ ಹುಲಿಯನ್ನು ನೀವೇ ಕೊಲ್ಲಿ, ಇಲ್ಲದಿದ್ದರೆ ನಾವೇ ಅದಕ್ಕೊಂದು ಗತಿ ಕಾಣಿಸುತ್ತೇವೆ ಎಂದು ಹೇಳುತ್ತಿದ್ದಾರೆ.