ಭಾಗಮಂಡಲ/ಕೊಡಗು : ಜಿಲ್ಲೆಯಲ್ಲಿ ಮಳೆ ಪ್ರಮಾಣ ತಗ್ಗಿದ ಹಿನ್ನೆಲೆ ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಕಾವೇರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಜಿಲ್ಲೆಯಲ್ಲಿ ಕಳೆದ 3 ದಿನಗಳಿಂದಲೂ ಧಾರಾಕಾರ ಮಳೆ ಸುರಿದ ಪರಿಣಾಮ ಹಲವೆಡೆ ಭೂಕುಸಿತ ಸಂಭವಿಸಿದೆ. ಜನ ವಸತಿ ಪ್ರದೇಶಗಳಲ್ಲೂ ಕಾವೇರಿಯ ನೀರು ಪ್ರವಾಹದಂತೆ ನುಗ್ಗಿತ್ತು. ಅಲ್ಲದೇ ತಲಕಾವೇರಿಯಲ್ಲಿ ಬ್ರಹ್ಮಗಿರಿ ಬೆಟ್ಟ ಕುಸಿದ ಪರಿಣಾಮ ಅರ್ಚಕ ಕುಟುಂಬದ ಐವರು ಕಣ್ಮರೆಯಾಗಿದ್ದಾರೆ. ಅವರ ಶೋಧ ಕಾರ್ಯಕ್ಕೂ ಮಳೆ ಅಡ್ಡಿ ಮಾಡಿತ್ತು. ನಿನ್ನೆ ರಾತ್ರಿಯಿಂದ ಮಳೆ ಸ್ವಲ್ಪ ಕಡಿಮೆಯಾದ ಹಿನ್ನೆಲೆ ಭಾಗಮಂಡಲದಲ್ಲಿ ವಾಹನಗಳ ಓಡಾಟ ಆರಂಭವಾಗಿದೆ.
ಇದಕ್ಕೂ ಮೊದಲು ಬಾಗಮಂಡಲ-ಮಡಿಕೇರಿ, ಭಾಗಮಂಡಲ ನಾಪೋಕ್ಲು ಸಂಚಾರ ಸ್ಥಗಿತಗೊಂಡಿತ್ತು. ಪ್ರವಾಹದ ನೀರು ಕಡಿಮೆಯಾದ ಹಿನ್ನೆಲೆ ವಾಹನಗಳ ಸಂಚಾರ ಆರಂಭ ಆಗಿರುವುದರಿಂದ ಕಾವೇರಿ ಶಾಂತವಾಗುವಂತೆ ಹಾಗೂ ಪ್ರವಾಹ ಸೃಷ್ಟಿಸದಿರಲಿ ಎಂದು ತ್ರಿವೇಣಿ ಸಂಗಮದಲ್ಲಿ ಭಗಂಡೇಶ್ವರ ದೇವಾಲಯದ ಅರ್ಚಕರು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.