ಕೊಡಗು/ವಿರಾಜಪೇಟೆ: ವಿರಾಜಪೇಟೆ ತಾಲೂಕಿನ ನೊಕ್ಯದ ದೇವರಕಾಡು ಫೈಸಾರಿ ಗ್ರಾಮಸ್ಥರು ಓಡಾಡದಂತೆ ಕಾಫಿ ತೋಟದ ಮಾಲೀಕ ಹಾಕಿಕೊಂಡಿದ್ದ ಗೇಟ್ ತೆರೆದು ತಾಲೂಕಾಡಳಿತ ಗ್ರಾಮಸ್ಥರ ಓಡಾಟಕ್ಕೆ ಅನುವು ಮಾಡಿಕೊಟ್ಟಿದೆ.
ಬಹಳ ಹಿಂದಿನಿಂದಲೂ ಗ್ರಾಮಸ್ಥರು ಇದೇ ಕಾಫಿ ತೋಟದೊಳಗೆ ಓಡಾಡುತ್ತಿದ್ದರು. ಆದರೆ ತೋಟದ ಮಾಲೀಕ ಒಮ್ಮೆ ಕೂಲಿ ಕೆಲಸಕ್ಕೆ ಕರೆದಾಗ ಬರಲಿಲ್ಲ ಎನ್ನುವ ಕಾರಣಕ್ಕೆ ಗ್ರಾಮಸ್ಥರು ಓಡಾಡುತ್ತಿದ್ದ ದಾರಿಗೆ ಗೇಟ್ ಅಳವಡಿಸಿ ಬಂದ್ ಮಾಡಿದ್ದರಂತೆ.
ಗ್ರಾಮದಲ್ಲಿ ಸುಮಾರು 30 ಕುಟುಂಬಗಳಿದ್ದು, ಶಾಲಾ-ಕಾಲೇಜು, ಪಟ್ಟಣಕ್ಕೆ ಹೋಗಬೇಕಾದರೆ ಇದೇ ದಾರಿಯನ್ನು ಅವಲಂಬಿಸಬೇಕಾಗಿದೆ. ಈ ದಾರಿ ಬಿಟ್ಟರೆ ಅರ್ಧ ಕಿ.ಮೀ. ಹೊಳೆ ದಾಟಿ ಮುಖ್ಯ ರಸ್ತೆಗೆ ನಡೆದುಕೊಂಡು ಬರಬೇಕು. ಮೊದಲು ಇದ್ದಂತಹ ಸ್ಥಳದಲ್ಲೇ ದಾರಿ ಬಿಡಿಸಿಕೊಡುವಂತೆ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ದಂಡಾಧಿಕಾರಿಗಳ ಗಮನಕ್ಕೆ ಹಲವು ಬಾರಿ ಮನವಿ ಮಾಡಿದ್ದರ ಹಿನ್ನೆಲೆಯಲ್ಲಿ ಇಂದು ಉಪ ವಿಭಾಗಾಧಿಕಾರಿ ಜವರೇಗೌಡ ನೇತೃತ್ವದ ತಂಡ ತೋಟದ ಮಾಲೀಕರೊಂದಿಗೆ ಚರ್ಚಿಸಿ ಮನವೊಲಿಸಿ ದಾರಿ ಮಾಡಿಕೊಟ್ಟಿದೆ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.