ಕೊಡಗು: ಬಾಗಮಂಡಲ-ತಲಕಾವೇರಿಯ ಚೇರಂಗಾಲದಲ್ಲಿ ಬರೆ ಕುಸಿತವಾದ ಸ್ಥಳಕ್ಕೆ ಎನ್‌ಡಿಆರ್‌ಎಫ್ ಸಿಬ್ಬಂದಿ ಭೇಟಿ ನೀಡಿ ರಸ್ತೆ ಮೇಲಿದ್ದ ಮಣ್ಣಿನ ರಾಶಿಯನ್ನು ತೆರವುಗೊಳಿಸಿದರು.
ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ತಲಕಾವೇರಿ, ಚೇರಂಗಾಲ ಮಧ್ಯೆ ಹೆದ್ದಾರಿಯಲ್ಲಿ ಭಾರೀ ಭೂಕುಸಿತವಾಗಿದೆ. ಬೆಟ್ಟದ ಮೇಲಿನ ವ್ಯೂವ್ ಪಾಯಿಂಟ್ ಸ್ಥಳದಿಂದ ಭೂ ಕುಸಿತವಾಗಿದ್ದು, ಭಾರೀ ಗಾತ್ರದ ಮರ, ಮಣ್ಣು ಮತ್ತು ಕಲ್ಲುಗಳು ರಸ್ತೆಗೆ ಉರುಳಿದ್ದವು. ಹೀಗಾಗಿ ಚೇರಂಗಾಲ, ತಲಕಾವೇರಿ ಮತ್ತು ತಲಕಾವೇರಿ ಹಾಗೂ ಬಾಗಮಂಡಲ ರಸ್ತೆ ಸಂಪರ್ಕ ಬಂದ್ ಆಗಿತ್ತು.
ಭೂ ಕುಸಿತವಾಗಿರುವ ಸ್ಥಳದಿಂದ ನೀರು ಹರಿಯುತ್ತಿದ್ದು ಮತ್ತಷ್ಟು ಭೂ ಕುಸಿಯುವ ಆತಂಕ ಎದುರಾಗಿತ್ತು. ಅಲ್ಲದೆ ತಲಕಾವೇರಿ ಬಾಗಮಂಡಲ ಸುತ್ತಮುತ್ತ ಬರೋಬ್ಬರಿ 75 ಇಂಚು ಮಳೆಯಾಗಿದೆ. ಹೀಗಾಗಿ ಕಾವೇರಿ ನದಿ ತುಂಬಿ ಹರಿಯುತ್ತಿದ್ದು, ಬಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದೆ.
ಅಲ್ಲದೆ ಬಾಗಮಂಡಲ ನಾಪೋಕ್ಲು ರಸ್ತೆಯಲ್ಲಿ ಮೇಲೆ ನೀರು ಹರಿಯುತ್ತಿದ್ದು, ಬಾಗಮಂಡಲ ನಾಪೋಕ್ಲು ರಸ್ತೆ ಸಂಪರ್ಕ ಕಡಿತವಾಗಿದೆ. ಮತ್ತೊಂದೆಡೆ ಮಡಿಕೇರಿಯಲ್ಲಿ ಬೆಳಿಗ್ಗೆಯಿಂದಲೂ ಮಳೆ ಬಿಟ್ಟು ಸುರಿದಿದ್ದು ಮಡಿಕೇರಿ ಆಕಾಶವಾಣಿ ಬಳಿ ಬರೆ ಕುಸಿದಿದೆ. 2018 ರಲ್ಲಿ ಬರೆ ಕುಸಿದಿದ್ದ ಸ್ಥಳದಲ್ಲೇ ಈ ಬಾರಿಯೂ ಮತ್ತೆ ಬರೆ ಕುಸಿದಿದೆ.
ಈ ಹಿಂದೆ ಬರೆ ಕುಸಿದಿದ್ದ ಸಂದರ್ಭ ತಡೆಗೋಡೆ ನಿರ್ಮಿಸಲಾಗುತಿತ್ತು. ಈ ವೇಳೆ ಬಾರೀ ಪ್ರಮಾಣದ ಮಣ್ಣು ಜಾರಿದೆ. ಅದೃಷ್ಟವಷಾತ್ ಕಾಮಗಾರಿ ಮಾಡುತ್ತಿದ್ದ ಕಾರ್ಮಿಕರು ಸ್ಥಳದಿಂದ ಓಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಟ್ಟಿನಲ್ಲಿ ಕೊಡಗಿನಲ್ಲಿ ಸುರಿಯುತ್ತಿರುವ ಮಳೆಗೆ ಜಿಲ್ಲೆಯಲ್ಲಿ ಹಲವೆಡೆ ಭೂ ಕುಸಿತದಂತಹ ಘಟನೆಗಳು ನಡೆದಿವೆ.