ಕೊಡಗು: ಮಡಿಕೇರಿಯ ಕ್ರಿಸ್ಟಲ್ ಕೋರ್ಟ್‍ನಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಮತ್ತು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಉಪ ಕೇಂದ್ರವಾಗಿರುವ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ 75 ನೇ ವರ್ಷಾಚರಣೆಯ ಪ್ರಯುಕ್ತ ಸೊಸೈಟಿ ಫಾರ್ ಪ್ರಮೋಷನ್ ಆಫ್ ಹಾರ್ಟಿಕಲ್ಚರ್ ಸಹಯೋಗದೊಂದಿಗೆ ಭದ್ರತೆ ಹಾಗೂ ಜೀವನೋಪಾಯಕ್ಕಾಗಿ ತೋಟಗಾರಿಕೆ ಬೆಳೆಗಳ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ವಸ್ತು ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಸಂಶೋಧಕರು ಆಗಮಿಸಿದ್ದು, ವಿವಿಧ ರಾಜ್ಯದ ಹಣ್ಣಿನ ಗಿಡಗಳು ಹಾಗೂ ತೋಟಗಾರಿಕೆ ಬೆಳೆಗಳ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು.
ಆನುವಂಶಿಕ ವೈವಿಧ್ಯತೆ, ಸಂರಕ್ಷಣೆ, ಬಳಕೆ ಮತ್ತು ಸುಧಾರಣೆ, ಬೆಳೆ ಉತ್ಪಾದನೆ, ಬೆಳೆ ಪದ್ಧತಿ ಮಾದರಿಗಳು ಮತ್ತು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಸಸ್ಯ ಸಂರಕ್ಷಣೆ, ಪರಾಗಸ್ಪರ್ಶ ಮತ್ತು ಜೇನುಸಾಕಣೆ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಸಾಮಾಜಿಕ, ಆರ್ಥಿಕ ಅಂಶಗಳು ಮತ್ತು ಮಾರುಕಟ್ಟೆಯ ಕುರಿತು ಸಂಶೋಧಕರು ರೈತರಿಗೆ ಸಂಪೂರ್ಣ ಮಾಹಿತಿ ನೀಡಿದರು.
ಕೊಡಗಿನ ರೈತರು ಅಲ್ಲಿಯ ಬೆಳೆಗಳ ಜೊತೆಗೆ ಇತರ ಉಪಬೆಳೆಗಳನ್ನು ಕೂಡ ಬೆಳೆದು ಲಾಭಗಳಿಸುವುದು ಹೇಗೆಂಬುದರ ಕುರಿತು ತಿಳಿಸಲಾಯಿತು. ಕಾರ್ಯಕ್ರಮದಲ್ಲಿ ಕೊಡಗು, ಕೇರಳ, ಹಿಮಾಚಲ ಪ್ರದೇಶ ಸೇರಿದಂತೆ ಸುಮಾರು 20 ಕ್ಕೂ ಹೆಚ್ಚು ವಿವಿಧ ಭಾಗದ ಮಳಿಗೆಗಳನ್ನು ಹಾಕಲಾಗಿದ್ದು, ಅಲ್ಲಿ ಹೊಸದಾಗಿ ಆವಿಷ್ಕರಿಸಿದ ಗಿಡಗಳು, ಹೊಸ ರೀತಿಯ ಹಣ್ಣಿನ ಗಿಡಗಳು ಹಾಗೂ ಹಣ್ಣುಗಳನ್ನು ಪ್ರದರ್ಶನ ಪಡಿಸಲಾಯಿತು. ಅದರಲ್ಲೂ ಮುಖ್ಯವಾಗಿ ಹಿಮಾಚಲ ಪ್ರದೇಶದಿಂದ ತಂದ ಸೇಬು ಗಿಡಗಳನ್ನು ಕೂಡ ಮೇಳದಲ್ಲಿ ಮಾರಾಟ ಮಾಡಲಾಯಿತು.
ಬಟರ್ ಫ್ರೂಟ್, ಕಿತ್ತಳೆ, ಚಕ್ಕೋತ, ಅಡಿಕೆ, ಜೇನು ಸೇರಿದಂತೆ ವಿವಿಧ ಜಾತಿಯ ತೋಟಗಾರಿಕ ಬೆಳೆಗಳ ಪ್ರದರ್ಶನ ನಡೆಯಿತು. ಕೊಡಗಿನಲ್ಲಿ ವಾಣಿಜ್ಯ ಬೆಳೆಗಳಾದ ಕಾಫಿ, ಏಲಕ್ಕಿ, ಕರಿ ಮೆಣಸು ಬೆಳೆಗಳನ್ನು ಮಾತ್ರ ರೈತರು ಬೆಳೆಯುತ್ತಿದ್ದು ಇದರ ಜೊತೆಗೆ ಇತರ ಉಪ ಬೆಳೆಗಳನ್ನು ಕೂಡ ಬೆಳೆಯಬಹುದೆಂಬುದನ್ನು ತಿಳಿಸಿಕೊಟ್ಟಿರೋದು ಬಹಳ ಸಹಕಾರಿಯಾಗಿದೆ ಎಂದು ಕೊಡಗಿನ ರೈತ ರತೀಶ್ ಹೇಳಿದರು.
ಕಾರ್ಯಕ್ರಮದಲ್ಲಿ ಚೆಟ್ಟಳ್ಳಿ ತೋಟಗಾರಿಕೆ ಕೇಂದ್ರದ ಮುಖ್ಯಸ್ಥ ಡಾ.ರಾಜೇಂದ್ರ ಸೇರಿದಂತೆ ಹಲವು ವಿಜ್ಞಾನಿಗಳು ವಿಚಾರ ಮಂಡಿಸಿದರು.
ಇದನ್ನೂ ಓದಿ: ಕುಡಿವ ನೀರಿನ ಬಾವಿಯಲ್ಲಿ ಡೀಸೆಲ್ ಪತ್ತೆ: ಆತಂಕಗೊಂಡ ಕುಟುಂಬಸ್ಥರು