ಕೊಡಗು: ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಕುಸಿಯುವ ಭೀತಿ ಎದುರಾಗಿದೆ.
ಈಗಾಗಲೇ ರಸ್ತೆ ಬದಿ ಜೋಡಿಸಿದ್ದ ಸ್ಯಾಂಡ್ ಬ್ಯಾಗ್ಗಳು ಕುಸಿದಿವೆ. ಪುನರ್ ನಿರ್ಮಾಣ ಮಾಡಿದ್ದ ಸ್ಥಳದಲ್ಲೇ ಹೆಚ್ಚಿಗೆ ನೀರು ಬರುತ್ತಿರುವ ಹಿನ್ನೆಲೆಯಲ್ಲಿ ಸ್ಯಾಂಡ್ ಬ್ಯಾಗ್ ಕೊಚ್ಚಿ ಹೋಗಿವೆ. ಆಧುನಿಕ ತಂತ್ರಜ್ಞಾನ ಬಳಸಿ ಕಾಮಗಾರಿ ನಡೆಸಿದ್ದರೂ ವರುಣನ ಅಬ್ಬರಕ್ಕೆ ಯಾವುದೂ ಶಾಶ್ವತವಾಗಿ ನಿಲ್ಲುತ್ತಿಲ್ಲ.
ಘಟನಾ ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಏಕಮುಖ ಸಂಚಾರ ಮಾಡಲು ಚಿಂತನೆ ನಡೆಸಿದ್ದಾರೆ. ಹೀಗೆ ನಿರಂತರ ಮಳೆ ಮುಂದುವರೆದಲ್ಲಿ ರಾಷ್ಟ್ರೀಯ ಹೆದ್ದಾರಿ 275 ಕುಸಿಯುವ ಭೀತಿ ಎದುರಾಗಿದೆ.