ಮಡಿಕೇರಿ: ಸಿದ್ದರಾಮಯ್ಯ ಮೊದಲು ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಳ್ಳಲಿ. ಈಗಾಗಲೇ ಅವರ ಆರೋಪಕ್ಕೆ ಯಡಿಯೂರಪ್ಪ ಅವರು ತಕ್ಕ ಉತ್ತರ ಕೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿರಾ ಕ್ಯಾಂಟಿನ್‌ನಲ್ಲಿ ನಡೆದಿದ್ದ ಅವ್ಯವಹಾರ ಬಗ್ಗೆ ತಾವು ಸಿಎಂ ಆಗಿದ್ದಾಗ ದಾಖಲೆಗಳನ್ನು ಕೊಟ್ಟಿದ್ದಿರಾ?. ಮನೆಗಳ ನಿರ್ಮಾಣದಲ್ಲಿ ನಡೆದ ಅವ್ಯವಹಾರ ಬಗ್ಗೆ ಮಾಹಿತಿ ಕೊಟ್ಟಿದ್ದೀರಾ?. ನಿಮ್ಮದೇ ಪಕ್ಷದ ಅಭ್ಯರ್ಥಿಯಾಗಿದ್ದ ಈಶ್ವರ ಖಂಡ್ರೆ ಮೇಲೆ ಮನೆಗಳ ನಿರ್ಮಾಣದಲ್ಲಿ ಕೇಳಿ ಬಂದಿದ್ದ ಆರೋಪಗಳಿಗೆ ಮೊದಲು ದಾಖಲೆ ಕೊಡಿ ಎಂದು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಸಿದ್ದರಾಮಯ್ಯ ಆರೋಪಕ್ಕೆ ಟಾಂಗ್ ನೀಡಿದರು.
ರಾಜ್ಯದಲ್ಲಿ ಸಿಎಂ ನೇತೃತ್ವದ ಸರ್ಕಾರ ಸಮರ್ಥವಾಗಿ ಕೊರೊನಾ ಪರಿಸ್ಥಿತಿಯನ್ನು ನಿಭಾಯಿಸುತ್ತಿದೆ. ಪ್ರತಿನಿತ್ಯ ಸಾಕಷ್ಟು ಪಾಸಿಟಿವ್ ವರದಿಗಳು ದಾಖಲಾಗುವಂತೆ, ಆಸ್ಪತ್ರೆಗಳಿಂದಲೂ ಗುಣಮುಖರಾಗುತ್ತಿದ್ದಾರೆ. 2018ರಲ್ಲಿ ಸಂಭವಿಸಿದ ಪ್ರವಾಹದ ಸಂದರ್ಭದಲ್ಲಿ ಮನೆಗಳನ್ನು ಕಳೆದುಕೊಂಡ ಜಿಲ್ಲೆಯ ಹಲವೆಡೆ ಸಂತ್ರಸ್ತರಿಗೆ ಮನೆಗಳನ್ನು ಹಸ್ತಾಂತರಿಸಲಾಗಿದೆ. ಮಳೆ ಹಾಗೂ ಕೊರೊನಾ ಸರ್ಕಾರದ ಮುಂದಿರುವ ಸವಾಲುಗಳು ಎಂದರು.
ಸ್ಥಳೀಯ ನಾಯಕರಿಗೆ ಸಚಿವ ಸ್ಥಾನ ನೀಡದೆ ವಂಚಿಸಲಾಗಿದೆ ಎಂಬ ಆರೋಪಕ್ಕೆ. ಬಿಜೆಪಿ ವ್ಯಕ್ತಿ ಆಧಾರಿತ ಪಕ್ಷವಲ್ಲ. 311 ಮಂಡಲಗಳಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ತೆಗೆದುಕೊಳ್ಳುತ್ತೇವೆ. ಒಂದು ವೇಳೆ ಕೆಲವರಿಗೆ ಅಸಮಾಧಾನ ಇದ್ದರೆ ಮುಂದಿನ ದಿನಗಳಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ಪಕ್ಷದಲ್ಲಿ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇದ್ದು ಮುಂದಿನ ದಿನಗಳಲ್ಲಿ ಸಿಎಂ ಸ್ಥಳೀಯ ನಾಯಕರಿಗೂ ಅವಕಾಶ ನೀಡಲಿದ್ದಾರೆ ಎಂದರು.
ಕೊರೊನಾ ಸಂಕಷ್ಟದಿಂದ ಭಾರತ ಆರ್ಥಿಕ ಮುಗ್ಗಟ್ಟು ಸಂಭವಿಸಿದ ಸಂದರ್ಭದಲ್ಲಿ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದೆ. ಆತ್ಮನಿರ್ಭರ ಸಂಕಲ್ಪದಡಿ ನರೆಗಾ ಯೋಜನೆ, ಸ್ವ ಉದ್ಯೋಗ, ಕೃಷಿ ಉತ್ಪಾದನೆಗೂ ಆದ್ಯತೆ ನೀಡುತ್ತಿದೆ. ದೇಶದಲ್ಲಿ 1.5 ಕೋಟಿ ಜನರಿಗೆ ಬಿಜೆಪಿ ಆಹಾರ ಪೂರೈಸಿದೆ. ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಗ್ರಾಮೀಣ ಜನತೆಯ ನೋವಿಗೆ ಸ್ಪಂದಿಸುತ್ತಿದೆ ಎಂದರು.