ಕುಶಾಲನಗರ/ಕೊಡಗು: ತಂದೆಯ ಜೊತೆಗಿದ್ದ ಮಗನನ್ನು ಸ್ವಂತ ತಾಯಿಯೇ ಅಪಹರಣ ಮಾಡಿಸಿರುವ ಘಟನೆ ಜಿಲ್ಲೆಯ ಕುಶಾಲನಗರದಲ್ಲಿ ನಡೆದಿದ್ದು, ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಶ್ರೀನಿವಾಸ್ ಮತ್ತು ಶೋಭಾ ಎಂಬುವವರು ಹಲವು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗಳ ನಡುವೆ ಬಿರುಕು ಉಂಟಾಗಿ ಉಂಡು ಮಲಗುವಷ್ಟರಲ್ಲಿ ಮುಗಿಯಬೇಕಾಗಿದ್ದ ಜಗಳ ಕೋರ್ಟ್ ಮೆಟ್ಟಿಲೇರಿತ್ತು. 2017 ರಲ್ಲಿ ಕೋರ್ಟ್ ಸಹ ಕೂಡಿ ಬಾಳುವಂತೆ ಬುದ್ದಿ ಹೇಳಿತ್ತು. ಇಬ್ಬರು ಮಕ್ಕಳಿದ್ದರೂ ಸಹ ಸರಿ ಹೋಗದ ದಂಪತಿ ದೂರವಾಗಿದ್ದರು.
ಆರು ವರ್ಷಗಳ ಹಿಂದೆಯೇ ದೂರವಾಗಿದ್ದ ದಂಪತಿಗಳು, ಸದ್ಯ ಕುಶಾಲನಗರದ ಕಾಳಮ್ಮ ಕಾಲೋನಿಯಲ್ಲಿ ಪತಿ ಶ್ರೀನಿವಾಸ್ ಮಗನೊಂದಿಗೆ ವಾಸವಾಗಿದ್ದರೆ, ಪತ್ನಿ ಶೋಭಾ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ಬ್ಯೂಟಿ ಪಾರ್ಲರ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಸದ್ಯ ಮಗು ಕಿಡ್ನಾಪ್ ಆಗಿದ್ದು, ಅದನ್ನು ತಾಯಿಯೇ ಮಾಡಿಸಿರುವುದಾಗಿ ಪತಿ ಶ್ರೀನಿವಾಸ್ ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿ ಮಗನನ್ನು ಕೊಡಿಸುವಂತೆ ಕಣ್ಣೀರು ಹಾಕುತ್ತಿದ್ದಾರೆ.
ಸಿಸಿಟಿವಿಯಲ್ಲಿ ಎನಿದೆ..?
ರಸ್ತೆಯಲ್ಲಿ ಕಾರೊಂದು ಬಂದು ನಿಂತಾಗ, ಕಾರಿನಿಂದ ಇಬ್ಬರು ಇಳಿಯುತ್ತಾರೆ. ಅದರಲ್ಲೊಬ್ಬ ಹೊಂಚು ಹಾಕುತ್ತಿದ್ದರೆ, ಮತ್ತೊಬ್ಬ ಬಡಾವಣೆಯೊಳಕ್ಕೆ ನುಗ್ಗಿ ಬಾಲಕನ ಬಾಯಿ ಮುಚ್ಚಿ, ಕುರಿಯನ್ನು ಎತ್ತಿಹಾಕಿಕೊಂಡು ಹೋಗುವಂತೆ ಕಾರಿನೊಳಗೆ ಹಾಕಿಕೊಂಡು ಹೋಗುತ್ತಾನೆ.
ಆದ್ರೆ ಈ ಪ್ರಕರಣದಲ್ಲಿ ತಾಯಿಯೇ ಅಪರಾಧಿ ಎನ್ನುವ ಭಾವನೆ ಬರುವಷ್ಟರಲ್ಲಿ, ಶೋಭಾನ ಭಾವ ಹೇಳುವ ಮಾತು ಹೀಗೂ ಉಂಟೇ ಎನಿಸುತ್ತದೆ.. ಶ್ರೀನಿವಾಸ್ಗೆ ಹುಡುಗಿಯರ ಶೋಕಿ ಇತ್ತು, ಅಲ್ಲದೆ ಹೆಂಡತಿಗೆ ಚಿತ್ರ ಹಿಂಸೆ ನೀಡುತ್ತಿದ್ದ ಎಂದು ಹೇಳುತ್ತಾರೆ. ಅಲ್ಲದೆ ಅಪಹರಣ ಮಾಡಿಲ್ಲ, ತಾಯಿಯೇ ಬಂದು ಮಗನನ್ನು ಕರೆದುಕೊಂಡು ಹೋಗಿದ್ದಾಳೆ ಎಂದು ಹೇಳುತ್ತಾರೆ.
ಒಟ್ಟಿನಲ್ಲಿ ಮಕ್ಕಳ ಭವಿಷ್ಯತ್ತಿನತ್ತ ನೋಡಬೇಕಿರುವ ಪೋಷಕರು ಹೀಗೆ ಜಗಳವಾಡಿಕೊಂಡು ಕೋರ್ಟ್, ಪೊಲೀಸ್ ಠಾಣೆ ಮೆಟ್ಟಿಲೇರುವುದರಿಂದ ಮಕ್ಕಳ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರುತ್ತದೆ ಎನ್ನುವುದನ್ನು ದಂಪತಿ ಅರ್ಥಮಾಡಿಕೊಳ್ಳಬೇಕಿದೆ.