ಕೊಡಗು: ರಾಜ್ಯದಲ್ಲಿ ಶಾಲೆಗಳನ್ನು ತೆರೆಯುವುದು ಬಿಡುವುದು ಪೋಷಕರು ಮತ್ತು ಶಿಕ್ಷಕರಿಗೆ ಬಿಟ್ಟ ವಿಚಾರವೇ ಹೊರತು, ಸರ್ಕಾರ ಅಧಿಕಾರಿಗಳನ್ನು ಕೂರಿಸಿಕೊಂಡು ಸಭೆ ನಡೆಸುವುದಲ್ಲ ಎಂದು ಎಂಎಲ್‌ಸಿ ವಿಶ್ವನಾಥ್ ಹೇಳಿದ್ದಾರೆ.
ಮಡಿಕೇರಿಯ ಹೊರ ವಲಯದಲ್ಲಿ ಕೊಡವ ನ್ಯಾಷನ್ ಕೌನ್ಸಿಲ್ನಿಂದ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಾಲೆಗಳನ್ನು ತೆರೆಯಬೇಕೋ ಬೇಡವೋ ಎನ್ನುವುದನ್ನು ಪೋಷಕರು, ಶಿಕ್ಷಣ ತಜ್ಞರೊಂದಿಗೆ ಚರ್ಚಿಸಬೇಕಾಗಿದೆ ಎಂದು ಸಲಹೆ ನೀಡಿದರು. ಇನ್ನೂ ಖಾಸಗಿ ಶಾಲೆಗಳ ಸಂಸ್ಥೆಗಳು ವಿದ್ಯಾರ್ಥಿಗಳಿಂದ ಶುಲ್ಕ ವಸೂಲಿ ಮಾಡಲು ಮುಂದಾಗಿರುವ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲ ಸಂದರ್ಭಗಳಲ್ಲೂ ಖಾಸಗಿ ಶಾಲೆಗಳ ಖಜಾನೆ ತುಂಬಬೇಕೆಂದರೆ ಹೇಗೆ. ಜನರು ಸಂಕಷ್ಟದಲ್ಲಿದ್ದಾರೆ, ಅವರ ಹೊಟ್ಟೆ ಖಜಾನೆಯನ್ನು ನೋಡಬೇಕಲ್ಲ. ಶಿಕ್ಷಣ ಸಂಸ್ಥೆಗಳ ಸಂಘವು ಸರ್ಕಾರದ ಅಧೀನದಲ್ಲಿದೇ ಹೊರತು, ಅದೇ ಸರ್ಕಾರವಲ್ಲ. ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘವನ್ನು ಹತೋಟಿಯಲ್ಲಿ ಇಡಬೇಕು ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಯಾರಿಗೆ ಸಚಿವಸ್ಥಾನ ಕೊಡಬೇಕು ಅಥವಾ ಬಿಡಬೇಕು ಎನ್ನುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ನಾವು ಹದಿನೇಳು ಜನರು ಬಿಜೆಪಿಗೆ ಬಂದಿದ್ದು, ಸಚಿವಸ್ಥಾನಕ್ಕಾಗಿ ಅಲ್ಲ ಬದಲಾಗಿ ಒಂದು ಹೊಸ ಅಲೆಯ ಸರ್ಕಾರ ರಚನೆಯಾಗಬೇಕು ಎಂಬುದು ನಮ್ಮೆಲ್ಲರ ಹಿತಾಶಕ್ತಿ ಆಗಿತ್ತು. ಹದಿನೇಳು ಜನರ ಪೈಕಿ ಹಲವರಿಗೆ ಸಚಿವಸ್ಥಾನ ದೊರೆತಿದೆ. ಕೆಲವರಿಗೆ ಮಾತ್ರ ಸಿಕ್ಕಿಲ್ಲ. ಅವರಿಗೂ ಸಚಿವಸ್ಥಾನ ಸಿಗುವ ವಿಶ್ವಾಸವಿದೆ ಎಂದರು. ಶ್ರೀನಿವಾಸ್ ಪ್ರಸಾದ್ ಅವರು ನಮ್ಮನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಶ್ವನಾಥ್, ನಾವೆಲ್ಲರೂ ಸ್ನೇಹಿತರು, ಅಂದು ಸಂಘಟಿತರಾಗಿ ಹೋರಾಟ ಮಾಡಿಕೊಂಡು ಬಂದಿದ್ದವರು. ಇಂದು ಅವರು ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಯಾರನ್ನೆಲ್ಲಾ ಕಡೆಗಣಿಸಲಾಗುತ್ತಿದೆಯೋ ಯಾರಿಗೆ ಗೊತ್ತು ಎಂದರು.
ನಿಗಮಗಳ ರಚನೆ ವಿಷಯಕ್ಕೆ ಪ್ರತಿಕ್ರಿಯಿಸಿ ರಾಜ್ಯದಲ್ಲಿ ವಿವಿಧ ಸಮುದಾಯಗಳು ನಿಗಮ ಸ್ಥಾಪನೆಗಾಗಿ ಹೋರಾಟ ಆರಂಭಿಸಿವೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ. ಒಂದು ಸಮುದಾಯದ ಅಭಿವೃದ್ಧಿ ನಿಗಮ ಅಥವಾ ಪ್ರಾಧಿಕಾರ ರಚನೆಗೆ ಸರ್ಕಾರ ನಿರ್ಧರಿಸುವ ಮೊದಲು ಸಂಬಂಧಿಸಿದವರೊಂದಿಗೆ ಚರ್ಚಿಸಿ, ಸಂವಾದಿಸಿ ನಿರ್ಧಾರ ಕೈಗೊಳ್ಳಬೇಕಾದ ಅಗತ್ಯವಿದೆ. ಆ ಬಳಿಕ ಆಯಾ ಸಮುದಾಯಗಳ ಸಾಂಸ್ಕೃತಿಕ ಅಧ್ಯಯನ ನಡೆಸಬೇಕಾಗಿದೆ ಎಂದರು.