ಕೊಡಗು: ಕೇವಲ ಐದು ಸಿನಿಮಾಗಳಲ್ಲಿ ನಟಿಸಿ ಕೋಟ್ಯಧಿಪತಿಗಳಾಗುತ್ತಿರುವ ಕೆಲವು ನಟಿಯರಿಗೆ ಅಷ್ಟೊಂದು ಹಣ ಅವರ ಪಿತ್ರಾರ್ಜಿತ ಆಸ್ತಿಯಾ ಎಂದು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪ್ರಶ್ನಿಸಿದ್ದಾರೆ.
ಮಡಿಕೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಲ್ಲಿ ಡ್ರಗ್ಸ್ ಬಳಕೆ ವ್ಯಾಪಕವಾಗಿ ಕಂಡು ಬರುತ್ತಿದೆ. ಇತ್ತೀಚೆಗೆ ಸಿನಿಮಾ ನಟನೆಗೆ ಬಂದು ಐದು ಸಿನಿಮಾಗಳನ್ನು ಮಾಡಿ ಕೋಟ್ಯಧಿಪತಿ ಆಗುತ್ತಿದ್ದಾರೆ. ಅವರಿಗೆ ಅಲ್ಲಿ ಕೊಡುತ್ತಿರುವ ಸಂಭಾವನೆ ಎಷ್ಟು?, ಎಷ್ಟೆಷ್ಟು ಸಿನಿಮಾಗಳನ್ನು ಮಾಡುತ್ತಿದ್ದಾರೆ. ನಿರ್ದೇಶಕರೊಂದಿಗೆ ಎಷ್ಟು ಸಂಭಾವನೆ ಪಡೆಯುತ್ತಾರೆ. ಒಂದು ವೇಳೆ ಅಡ್ಡದಾರಿ ಹಿಡಿದು ಅನಧಿಕೃತವಾಗಿ ಹಣವನ್ನು ಸಂಪಾದಿಸಿದ್ದರೆ ಆ ಹಣವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದರು.
ಡ್ರಗ್ಸ್‌ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಗಟ್ಟಿ ನಿರ್ಧಾರವನ್ನು ತೆಗೆದುಕೊಂಡಿದೆ. ಡ್ರಗ್ಸ್ ಬಳಸುತ್ತಿರುವವರು ಯಾವುದೇ ಪಕ್ಷದಲ್ಲಿದ್ದರೂ ಅಂತಹವರನ್ನು ಬಂಧಿಸಬೇಕು. ಇದರಲ್ಲಿ ಯಾವುದೇ ಸಚಿವರು, ರಾಜಕೀಯ ನಾಯಕರು ಭಾಗಿಯಾಗಿದ್ದರೂ ಸಹ ಅವರ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗೆ ತಳ್ಳಬೇಕು.
ಹಾಗೆಯೇ ಜಿಲ್ಲೆಯಲ್ಲೂ ಇತ್ತೀಚೆಗೆ ಗಾಂಜಾ ಪ್ರಕರಣಗಳು ಹೆಚ್ಚುತ್ತಿದ್ದು, ಇದಕ್ಕೆ ಪೊಲೀಸ್ ಇಲಾಖೆಯಲ್ಲೇ ಕೆಲವರು ಕುಮ್ಮಕ್ಕು ನೀಡುತ್ತಿದ್ದ ಅಂಶಗಳು ಗಮನಕ್ಕೆ ಬಂದಿವೆ. ಮಾಮೂಲಿ ತೆಗೆದುಕೊಂಡು ಆರೋಪಿಗಳನ್ನು ಬಿಟ್ಟು ಕಳುಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳುತ್ತಿದ್ದು, ಸಧ್ಯದಲ್ಲೇ ಇಡೀ ವ್ಯವಸ್ಥೆ ಸರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.