ಕೊಡಗು: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಕಡಿಮೆ ಮಾಡಲು ಶಾಸಕ ಅಪ್ಪಚ್ಚು ರಂಜನ್ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದರು.
ಮಡಿಕೇರಿ ನಗರದ ನಗರಸಭೆ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಬಗ್ಗೆ ನಗರಸಭೆ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ, ಕಡು ಬಡವರಿಗೆ ಆಹಾರ ಕಿಟ್ ವಿತರಣೆ ಮಾಡುವುದಾಗಿ ಘೋಷಣೆ ಮಾಡಿದರು. ಆಹಾರ ಕಿಟ್‍ನಲ್ಲಿ 10 ಕೆ.ಜಿ.ಅಕ್ಕಿ, ಒಂದು ಕೆ.ಜಿ.ತೊಗರಿ ಬೇಳೆ, ಒಂದು ಲೀಟರ್ ಅಡುಗೆ ಎಣ್ಣೆ, ಅರ್ಧ ಕೆ.ಜಿ. ಸಾಂಬಾರು ಪದಾರ್ಥ ಹಾಗೂ ಉಪ್ಪು ಒಳಗೊಂಡಿರುತ್ತದೆ. ಈ ತಿಂಗಳ ಅಂತ್ಯದೊಳಗೆ ಆಹಾರ ಕಿಟ್ ವಿತರಿಸಲಾಗುವುದು ಎಂದು ಶಾಸಕ ಅಪ್ಪಚ್ಚು ರಂಜನ್ ತಿಳಿಸಿದರು.
ಮಡಿಕೇರಿ ನಗರದಲ್ಲಿ ಕೊರೊನಾ ಮುಕ್ತ ವಾರ್ಡ್‍ಗೆ ತಲಾ 2 ಲಕ್ಷ ರೂ.ಯನ್ನು ಶಾಸಕರ ನಿಧಿಯಿಂದ ಅನುದಾನ ನೀಡಲಾಗುವುದು. ಲಾಕ್‍ಡೌನ್ ಪರಿಣಾಮದಿಂದ ಇತ್ತೀಚೆಗೆ ಕೋವಿಡ್ ಸೋಂಕಿತರ ಪಾಸಿಟಿವಿಟಿ ಮತ್ತು ಮರಣ ಪ್ರಮಾಣ ಕಡಿಮೆಯಾಗುತ್ತಿದ್ದು, ಆ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿಯನ್ನು ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಆ ದಿಸೆಯಲ್ಲಿ ನಗರಸಭೆ ಸದಸ್ಯರು ಸ್ಥಳೀಯರಿಗೆ ಮಾಹಿತಿ ನೀಡಬೇಕು.
ಹೋಂ ಕ್ವಾರಂಟೈನಲ್ಲಿರುವವರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರಬಾರದು, ಸಮಸ್ಯೆ ಇದ್ದಲ್ಲಿ ಕೋವಿಡ್ ಆರೈಕೆ ಕೇಂದ್ರದಲ್ಲಿ ದಾಖಲಾಗಬೇಕು. ಆ ದಿಸೆಯಲ್ಲಿ ನಗರಸಭೆ ಸದಸ್ಯರು ಗಮನಿಸಬೇಕು. ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಜೊತೆ ಕುಟುಂಬದವರು ತಂತ್ರಜ್ಞಾನದ ಮೂಲಕ ಮುಖಾಮುಖಿಯಾಗಿ ಮಾತನಾಡಲು ಅವಕಾಶ ಮಾಡಲಾಗುವುದು, ಜೊತೆಗೆ ಸಿಸಿಟಿವಿ ಅಳವಡಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಕೋವಿಡ್ ಪಾಸಿಟಿವ್ ಬಂದವರನ್ನು ತಕ್ಷಣವೇ ಕ್ವಾರಂಟೈನ್‍ಗೆ ದಾಖಲಿಸಬೇಕು. ಪ್ರಾಥಮಿಕ ಸಂಪರ್ಕಿತರನ್ನು ಕೋವಿಡ್ ಪರೀಕ್ಷೆ ಮಾಡಬೇಕು. ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ನಗರಸಭೆ ಸದಸ್ಯರಿಗೆ ಸಲಹೆ ಮಾಡಿದರು. ವರ್ತಕರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ಪ್ರಮಾಣ ಪತ್ರವನ್ನು ಹಣ್ಣು, ತರಕಾರಿ ಮತ್ತಿತರ ಮಾರಾಟ ಸಂದರ್ಭದಲ್ಲಿ ಪ್ರದರ್ಶನ ಮಾಡಬೇಕು ಎಂದರು.
ಇದನ್ನೂ ಓದಿ: ಮೃತರ ಅಸ್ತಿ, ಚಿತಾಭಸ್ಮ ವಿಸರ್ಜಿಸಲು ಅನುಮತಿ ನೀಡಿ ಸರ್ಕಾರ ಆದೇಶ