ಕೊಡಗು: ಸರ್ಕಾರ ನೆರೆ ಸಂತ್ರಸ್ತರಿಗೆ ಎರಡು ಕಂತುಗಳಲ್ಲಿ 50 ಸಾವಿರ ಕೊಡುತ್ತೆ. ಹೀಗಾಗಿ ನಿರಾಶ್ರಿತ ಶಿಬಿರ ಬಿಟ್ಟು ಬದುಕು ಸಾಗಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ ಸಂತ್ರಸ್ತರ ಶಿಬಿರಕ್ಕೆ ಭೇಟಿ ನೀಡಿದ ವೇಳೆ ನಿರಾಶ್ರಿತರೊಂದಿಗೆ ಸಚಿವರು ಮಾತನಾಡಿದ್ದಾರೆ.
ನೀವು ಶಾಲೆಯಲ್ಲಿ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಹತ್ತು ತಿಂಗಳಲ್ಲಿ ಮನೆ ನಿರ್ಮಿಸಿ ಕೊಡುತ್ತೇವೆ. ಸದ್ಯ ಗುಡಿಸಲು ನಿರ್ಮಾಣಕ್ಕೆ 25 ಸಾವಿರ ರೂದಂತೆ 2 ಕಂತುಗಳಲ್ಲಿ 50 ಸಾವಿರ ರೂ ಪಾವತಿಸುತ್ತೇವೆ ಎಂದು ಸಚಿವ ಸೋಮಣ್ಣ ಆಶ್ವಾಸನೆ ಕೊಟ್ಟರು.
ನದಿ ತೀರದಲ್ಲಿದ್ದ ಮನೆಗಳನ್ನು ಕಳೆದುಕೊಂಡು ನಿರಾಶ್ರಿತ ಕೇಂದ್ರಗಳಲ್ಲಿ ಒಟ್ಟು 58 ಕುಟುಂಬಗಳಿದ್ದು, ಶಾಶ್ವತ ಸೂರು ಸಿಗೋವರೆಗೆ ಶಿಬಿರದಲ್ಲೇ ಇರುವುದಾಗಿ ಸಂತ್ರಸ್ತರು ಹಠ ಹಿಡಿದಿದ್ದರು. ಕುಂಬಾರಗುಂಡಿ, ಬೆಟ್ಟಕಾಡು ಸೇರಿದಂತೆ ವಿವಿಧ ಗ್ರಾಮಗಳ ನಿವಾಸಿಗಳು ಸೂರುಗಳನ್ನು ಕಳೆದುಕೊಂಡಿದ್ದರು.