ಕೊಡಗು : ಮಡಿಕೇರಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮದಲ್ಲಿ ವಸತಿ ಸಚಿವ ಸೋಮಣ್ಣ ಪಾಲ್ಗೊಂಡರು. ಬಳಿಕ ಮಾತನಾಡಿದ ಅವರು, ಕೇರಳದ ಮಲ್ಲಪ್ಪುರಂನಲ್ಲಿ ಕಿಡಿಗೇಡಿಗಳು ಅನಾನಸ್ ಹಣ್ಣಿಗೆ ಸ್ಫೋಟಕ ಇಟ್ಟು ಗರ್ಭಿಣಿ ಆನೆ ಕೊಂದಿದ್ದರು. ಇದು ಅತ್ಯಂತ ನೋವಿನ ಮತ್ತು ದುರದೃಷ್ಟಕರ ಸಂಗತಿ. ಇಂತಹ ಹೇಯ ಕೃತ್ಯ ಎಂದೂ ನಡೆಯಬಾರದು ಎಂದರು.
ಕೊಡಗು ವಿಶೇಷವಾದ ಪ್ರಾಕೃತಿಕ ಸಂಪತ್ತು ಹೊಂದಿದೆ. ದೇಶಕ್ಕಷ್ಟೇ ಅಲ್ಲ, ವಿಶ್ವದ ಪರಿಸರಕ್ಕೆ ಕೊಡುಗೆ ನೀಡಿದೆ. ಪರಿಸರದಲ್ಲಿ ಮನುಷ್ಯನ ಜೊತೆಗೆ ಗಿಡ, ಮರ, ಪ್ರಾಣಿ ಪಕ್ಷಿಗಳು ಸ್ವತಂತ್ರವಾಗಿ ಬದುಕುವುದಕ್ಕೆ ಅವಕಾಶವಿದೆ ಎಂದರು.
ಇದೇ ವೇಳೆ ಮಡಿಕೇರಿಯಲ್ಲಿ ಮರು ನಿರ್ಮಾಣಗೊಂಡಿರುವ ಗ್ರಂಥಾಲಯದ ಮುಂಭಾಗದಲ್ಲಿ ಸಚಿವ ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಮತ್ತು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಗಿಡಗಳನ್ನು ನೆಟ್ಟು ನೀರೆರೆದರು.