ಕೊಡಗು: ಹಲವು ದಶಕಗಳ ಹೋರಾಟದ ಪ್ರತಿಫಲವಾಗಿ ಜಿಲ್ಲೆಯ ಕುಶಾಲನಗರ ತಾಲೂಕು ಇಂದು ಉದ್ಘಾಟನೆಗೊಂಡಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ 28 ನೂತನ ತಾಲೂಕುಗಳ ಪಟ್ಟಿಯಲ್ಲಿ ಕುಶಾಲನಗರ 27ನೇ ತಾಲೂಕಾಗಿ ಸ್ಥಾನ ಪಡೆದಿತ್ತು.
ಕುಶಾಲನಗರ ತಾಲೂಕಿನ ತಹಶೀಲ್ದಾರ್ ಕಚೇರಿಯನ್ನು ಕಂದಾಯ ಸಚಿವ ಆರ್. ಅಶೋಕ್ ಉದ್ಘಾಟನೆ ಮಾಡಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ತಾಲೂಕಿನ ಎಲ್ಲಾ ವ್ಯವಹಾರಗಳು ಇನ್ನುಮುಂದೆ ಇಲ್ಲೇ ಆರಂಭವಾಗಲಿದ್ದು, ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜನ ಸಂಖ್ಯೆಗೆ ಅನುಗುಣವಾಗಿ ತಾಲೂಕು ರಚನೆ ಮಾಡಲಾಗಿದೆ.
ದಶಕಗಳ ಇತಿಹಾಸ: ಕುಶಾಲನಗರ ತಾಲೂಕು ಬೇಡಿಕೆಗೆ ದಶಕಗಳ ಇತಿಹಾಸ ಇದೆ. ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವಧಿಯಲ್ಲೇ ಕಾವೇರಿ ತಾಲೂಕಿನ ಕನಸು ಚಿಗುರೊಡೆದಿತ್ತು. ಪಕ್ಕದ ಮೈಸೂರು ಜಿಲ್ಲೆಯ ಹಾರ್ನಹಳ್ಳಿ ಹೋಬಳಿ ಸೇರಿಸಿಕೊಂಡು ತಾಲೂಕು ರಚಿಸಬೇಕು ಎನ್ನುವುದು ಗುಂಡೂರಾವ್ ಕನಸಾಗಿತ್ತು. ಈ ಸಂಬಂಧ 1992ರಿಂದಲೇ ಹೋರಾಟಗಳು ಆರಂಭವಾಗಿದ್ದವು. ಜೆ.ಹೆಚ್.ಪಟೇಲ್ ಮುಖ್ಯಮಂತ್ರಿ ಆಗಿದ್ದ ಸಂದರ್ಭ ತಾಲೂಕು ಹೋರಾಟ ಮುನ್ನೆಲೆಗೆ ಬಂದಿತ್ತು.
ಅಂಚೆ, ಪತ್ರ ಚಳವಳಿ, ಪ್ರತಿಭಟನೆ, ಬಂದ್, ಜಾಥಾ ಸೇರಿದಂತೆ ಎಲ್ಲ ಬಗೆಯ ಒತ್ತಡ ತಂತ್ರಗಳ ಮೂಲಕ ಸರ್ಕಾರಗಳ ಮುಂದೆ ಕುಶಾಲನಗರ ತಾಲೂಕು ಹೋರಾಟ ಸಮಿತಿ ತನ್ನ ಬೇಡಿಕೆ ಇಡುತ್ತಲೇ ಬಂದಿತ್ತು. ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಸಿದ್ಧವಾಗಿದ್ದ 28 ನೂತನ ತಾಲೂಕುಗಳ ಪಟ್ಟಿಯಲ್ಲಿ ಕುಶಾಲನಗರ 27ನೇ ತಾಲೂಕಾಗಿ ಸ್ಥಾನವನ್ನೂ ಪಡೆದಿತ್ತು.
ಇದನ್ನೂ ಓದಿ: ಕೇಂದ್ರ ಸಂಪುಟ ವಿಸ್ತರಣೆ.. ಬನ್ನಿ ಅಂತಾ ಕರೆದಾರ್, ಜುಲೈ 8ಕ್ಕೆ ದೆಹಲಿಗೆ ಹೋಗ್ತೀನಿ.. ರಮೇಶ್ ಜಿಗಜಿಣಗಿ