ಕೊಡಗು: "ಜಿಲ್ಲೆಯಲ್ಲಿ 29 ಸ್ಕ್ಯಾನಿಂಗ್ ಕೇಂದ್ರಗಳಿದ್ದು, ಸ್ಕ್ಯಾನಿಂಗ್ ಕೇಂದ್ರಗಳಿಗೆ ಆಗಾಗ ಭೇಟಿ ನೀಡಿ ತಪಾಸಣೆ ನಡೆಸುವಂತೆ" ಸಂಬಂಧಪಟ್ಟ ಅಧಿಕಾರಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜಿಲ್ಲೆಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ವಿವಿಧ ಕಾರ್ಯಗಳ ಪ್ರಗತಿ ಹಾಗೂ ಅನುಷ್ಠಾನ ಸಂಬಂಧ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
"ಕೆಲವು ಜಿಲ್ಲೆಯಲ್ಲಿ ಭ್ರೂಣಹತ್ಯೆ ಮಾಡುತ್ತಿರುವ ವಿಚಾರ ಕೇಳಿ ಬರುತ್ತಿದ್ದು, ಭ್ರೂಣಹತ್ಯೆ ಗಂಭೀರವಾಗಿ ಪರಿಗಣಿಸಬೇಕು. ಕೊಡಗು ಜಿಲ್ಲೆಯಲ್ಲಿ ಕಳೆದ 21 ವರ್ಷದಲ್ಲಿ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಈ ಸಂಬಂಧ ಒಂದು ಪ್ರಕರಣವು ದಾಖಲಾಗಿಲ್ಲ. ಆ ನಿಟ್ಟಿನಲ್ಲಿ ಎಲ್ಲವೂ ಸರಿಯಿದೆಯೇ ಎಂಬುದನ್ನು ಆತ್ಮವಿಮರ್ಶೆ ಮಾಡಬೇಕಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯಾಧಿಕಾರಿಗಳು ಸ್ಟಿಂಗ್ ಆಪರೇಷನ್ ಮೂಲಕ ಸ್ಕ್ಯಾನಿಂಗ್ ಕೇಂದ್ರಗಳ ಚಟುವಟಿಕೆ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಜೊತೆಗೆ ಸಾರ್ವಜನಿಕರಿಂದಲೂ ಅಭಿಪ್ರಾಯ ಪಡೆಯುವಂತಾಗಬೇಕು" ಎಂದು ಸೂಚನೆ ನೀಡಿದರು.
"ಲಿಂಗ ಆಯ್ಕೆ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಸ್ಕ್ಯಾನಿಂಗ್ ಕೇಂದ್ರಗಳು ಅಧಿಕೃತವಾಗಿ ನೋಂದಣಿಯಾಗಿರಬೇಕು. ಅನಧಿಕೃತ ಸ್ಕ್ಯಾನಿಂಗ್ ಕೇಂದ್ರಗಳು ನಡೆಯಬಾರದು" ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ಕೊಡಗು ಜಿಲ್ಲೆಯಲ್ಲಿ ಲಿಂಗಾನುಪಾತವು 978 ಇದೆ ಎಂದು ಮಾಹಿತಿ ನೀಡಿದರು.
"ಕೊಡಗು ಜಿಲ್ಲೆಯ ಬಗ್ಗೆ ವಿಶೇಷ ಆಸಕ್ತಿ ಇದ್ದು, ಅಭಿವೃದ್ಧಿ ಕಾರ್ಯಗಳು ನಡೆಯಬೇಕು. ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮಗಳು, ಮಾನವ ಸಂಪನ್ಮೂಲ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಠಾನವಾಗಬೇಕು. ಇಲಾಖೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸುವುದು, ಹಲವು ವಿಷಯಗಳ ಮಾಹಿತಿ ಸಂಗ್ರಹಿಸಿ ಬೇಡಿಕೆಗೆ ಸ್ಪಂದಿಸುವುದು ಕರ್ತವ್ಯ. ಸಮಾಜದಲ್ಲಿ ಶಿಕ್ಷಣ ಮತ್ತು ಆರೋಗ್ಯ ಆಧಾರ ಸ್ತಂಭವಾಗಿದ್ದು, ಇವುಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಹ ಇಚ್ಛಾಶಕ್ತಿ ಅತ್ಯಗತ್ಯವಾಗಿದ್ದು, ಶ್ರದ್ಧೆಯಿಂದ ಕಾರ್ಯ ನಿರ್ವಹಿಸಬೇಕು" ಎಂದು ಸಚಿವರು ಸಲಹೆ ನೀಡಿದರು.
"ಕೊಡಗು ಜಿಲ್ಲೆಯಲ್ಲಿ 1336 ಮಂಜೂರಾತಿ ಹುದ್ದೆಯಲ್ಲಿ 838 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 498 ಹುದ್ದೆಗಳು ಖಾಲಿ ಇದ್ದು, ಈ ಸಂಬಂಧ ಕೊಡಗು ಜಿಲ್ಲೆಯನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಖಾಲಿ ಹುದ್ದೆ ಭರ್ತಿಗೆ ಕ್ರಮವಹಿಸಲಾಗುವುದು" ಎಂದು ತಿಳಿಸಿದರು.
ಇದನ್ನೂ ಓದಿ: 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ, ಕೊರೊನಾ ರೂಪಾಂತರಿ ಬಗ್ಗೆ ಆತಂಕ ಬೇಡ: ದಿನೇಶ್ ಗುಂಡೂರಾವ್