ಕೊಡಗು : ಕೆಇಆರ್‌ಸಿ ಅಭಿವೃದ್ಧಿ ಶುಲ್ಕದ ನೆಪದಲ್ಲಿ ಹೆಚ್ಚುವರಿಯಾಗಿ ಜನರಿಂದ ಹಣ ಸಂಗ್ರಹಿಸುತ್ತಿದೆ ಎಂದು ವಿದ್ಯುತ್ ಬಳಕೆದಾರರ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಮನೋಜ್ ಬೋಪಯ್ಯ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಇಆರ್‌ಸಿ ಅಭಿವೃದ್ಧಿ ಶುಲ್ಕದ ನೆಪದಲ್ಲಿ ಜನರಿಂದ ಹೆಚ್ಚುವರಿ ಹಣ ಸಂಗ್ರಹಿಸುತ್ತಿದೆ. ಹೊಸ ವಿದ್ಯುತ್ ಸಂಪರ್ಕ ಪಡೆಯಲು ಅಭಿವೃದ್ಧಿ ಶುಲ್ಕವಾಗಿ ನಗರ ಪ್ರದೇಶಕ್ಕೆ 4 ಸಾವಿರದಿಂದ 6,500 ಹಾಗೂ ಗ್ರಾಮಾಂತರ ಪ್ರದೇಶಕ್ಕೆ 3 ಸಾವಿರದಿಂದ 5,750ಕ್ಕೆ ಹೆಚ್ಚಿಸಿ ದರ ನಿಗದಿಪಡಿಸಿದೆ. ಇದರಲ್ಲಿ ಕೆಲವು ಗೊಂದಲಗಳು ಸೃಷ್ಟಿಯಾಗಿದ್ದು,ಹೆಚ್ಚಾಗಿರುವ ದರಗಳು ಪ್ರಸ್ತುತ ಇರುವ ವಿದ್ಯುತ್ ಕಂಬದಿಂದ ಸಂಪರ್ಕ ಪಡೆಯಲು, ಬಡಾವಣೆಯಲ್ಲಿ ಇಲ್ಲದ ನಿವೇಶನಗಳಿಗೆ ಸಂಪರ್ಕ ಪಡೆಯಲು, ಹೆಚ್ಚುವರಿ ವಿದ್ಯುತ್ ಸಂಪರ್ಕ ಪಡೆಯಲು, ಹೆಚ್ಚುವರಿ ವಿದ್ಯುತ್ ಭಾರ ಪಡೆಯಲು ಮತ್ತು ಸರ್ಕಾರದ ಯೋಜನೆಗಳಿಂದ ಬಡವರಿಗೆ ಉಚಿತವಾಗಿ ವಿದ್ಯುತ್ ಒದಗಿಸುವ ಸಂಪರ್ಕಗಳಿಗೆ ವಿದ್ಯುತ್ ಭಾರ ಪಡೆಯಲು ಅನ್ವಯವಾಗುತ್ತದೆಯೇ ಎಂಬುವುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
2020ರ ಫೆಬ್ರವರಿ 11ರಂದು ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕೆಇಆರ್‌ಸಿ ಸಭೆಯಲ್ಲಿ ಬಡಾವಣೆಯಲ್ಲಿರುವ ನಿವೇಶನಗಳಿಗೆ ಮಾತ್ರ ಅಭಿವೃದ್ಧಿ ಶುಲ್ಕವನ್ನ ಏರಿಕೆ ಮಾಡಿರುವುದಾಗಿ ಸೆಸ್ಕ್‌ನ ವ್ಯವಸ್ಥಾಪಕ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. ಹೀಗಿದ್ದರೂ ಕೊಡಗು ವಿಭಾಗದ ಕಾರ್ಯಪಾಲಕ ಅಭಿಯಂತರ ಸೋಮಶೇಖರ್ ಅವರು ಉದ್ದೇಶ ಪೂರ್ವಕವಾಗಿ ಗ್ರಾಹಕರ ಮೇಲೆ ಅಭಿವೃದ್ಧಿ ಶುಲ್ಕವನ್ನು ಹೇರಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.