ಕೊಡಗು: ಉಸಿರಾಟದ ತೊಂದರೆಯಿಂದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ 58 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವುದು ಕೊಡಗಿನಲ್ಲಿ ಕೊರೊನಾಕ್ಕೆ ಮೊದಲ ವ್ಯಕ್ತಿ ಬಲಿಯಾಗಿದ್ದಾರಾ ಎನ್ನುವ ಅನುಮಾನ ಮೂಡಿದೆ.
ಜಿಲ್ಲೆಯ ಕುಶಾಲನಗರದ 58 ವರ್ಷದ ವ್ಯಕ್ತಿಯೊಬ್ಬರು ಕಳೆದ 7 ದಿನಗಳ ಹಿಂದೆ ಉಸಿರಾಟದ ತೊಂದರೆಯಿಂದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಅಧಿಕ ರಕ್ತದೊತ್ತಡ ಮತ್ತು ಡಯಾಬಿಟೀಸ್ನಂತಹ ಕಾಯಿಲೆಗಳು ಕೂಡ ಇದ್ದವು. ಜೊತೆಗೆ ತೀವ್ರ ಉಸಿರಾಟದ ತೊಂದರೆ ಇದ್ದಿದ್ದರಿಂದ ವ್ಯಕ್ತಿಯನ್ನು ವಾರದ ಹಿಂದೆಯೇ ಮಡಿಕೇರಿಯಲ್ಲಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತಪಟ್ಟಿದ್ದಾರೆ.
ಕೊರೊನಾ ರೋಗ ಲಕ್ಷಣಗಳು ಇದ್ದಿದ್ದರಿಂದ ವ್ಯಕ್ತಿಯ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಿಲ್ಲ. ಬದಲಾಗಿ ಜಿಲ್ಲಾಡಳಿತವೇ ಸರ್ಕಾರದ ಮಾರ್ಗಸೂಚಿ ಪ್ರಕಾರ ಮಡಿಕೇರಿಯಲ್ಲೇ ಅಂತ್ಯ ಸಂಸ್ಕಾರ ಮಾಡಿದೆ. ಅಂತ್ಯ ಸಂಸ್ಕಾರದಲ್ಲಿ ಮೃತ ವ್ಯಕ್ತಿಯ ಪುತ್ರ, ಸಂಬಂಧಿಕರು ಸೇರಿ ಕೇವಲ ನಾಲ್ಕು ಜನರು ಮಾತ್ರವೇ ಭಾಗವಹಿಸಿದ್ದರು.
ಮೃತ ವ್ಯಕ್ತಿಯ ಗಂಟಲ ದ್ರವವನ್ನು ವೈದ್ಯರು ಸಂಗ್ರಹಿಸಿ ಕೊರೊನಾ ಟೆಸ್ಟ್ ಲ್ಯಾಬ್‍ಗೆ ಕಳುಹಿಸಿದ್ದು, ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ. ಒಂದು ವೇಳೆ ಗಂಟಲು ದ್ರವದ ಕೋವಿಡ್ ಟೆಸ್ಟ್ ಪಾಸಿಟಿವ್ ಬಂದಲ್ಲಿ ಕೊಡಗಿನಲ್ಲಿ ಕೊರೊನಾ ಮಹಾಮಾರಿಗೆ ಮೊದಲ ಬಲಿ ಇದಾಗಲಿದೆ. ಅದೃಷ್ಟವಶಾತ್ ನೆಗೆಟಿವ್ ಬಂದಲ್ಲಿ ಕೊಡಗಿನ ಜನರು ಕೊಂಚ ನಿಟ್ಟುಸಿರು ಬಿಡಲಿದ್ದಾರೆ.