ಮಡಿಕೇರಿ: ನಗರಸಭೆ ವ್ಯಾಪ್ತಿಯ 23ವಾರ್ಡ್ ಗಳ 27 ಮತಗಟ್ಟೆಗಳಲ್ಲಿ ಮಂಗಳವಾರ ಶಾಂತಿಯುತ ಮತದಾನ ನಡೆಯಿತು.
ಪುರುಷರು ಮತ್ತು ಮಹಿಳೆಯರು ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದ್ದು ಕಂಡುಬಂತು. ವಿದ್ಯಾನಗರ, ಕಾವೇರಿ ಬಡಾವಣೆ, ಗದ್ದಿಗೆ, ಆಜಾದ್ ನಗರ, ದೇಚೂರು, ಕನ್ನಂಡಬಾಣೆ, ಗಣಪತಿ ಬೀದಿ, ಮಹದೇವಪೇಟೆ, ಅಂಬೇಡ್ಕರ್ ಬಡಾವಣೆ, ಕನಕದಾಸ ರಸ್ತೆ, ದಾಸವಾಳ ರಸ್ತೆ, ಪುಟಾಣಿ ನಗರ, ಸೇರಿದಂತೆ ಹಲವು ವಾರ್ಡ್‍ಗಳಲ್ಲಿ ಮತದಾರರು ಉತ್ಸಾಹದಿಂದ ಮತದಾನದ ಹಕ್ಕು ಚಲಾಯಿಸಿದರು.
ಬೆಳಗಿನ ವೇಳೆಯಲ್ಲಿ ಬಿರುಸಿನ ಮತದಾನ ನಡೆಯಿತು. ಕೋವಿಡ್ ಹಿನ್ನೆಲೆ ನಗರಸಭೆ ವ್ಯಾಪ್ತಿಯ ಎಲ್ಲ ಮತಗಟ್ಟೆಗಳಲ್ಲಿ ಥರ್ಮೋಸ್ಕ್ಯಾನರ್ ಮೂಲಕ ತಪಾಸಣೆ ಮಾಡಿ ಮತಗಟ್ಟೆಗೆ ಕಳುಹಿಸಲಾಯಿತು. ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು, ಮತದಾನದ ಕೊನೆಯ ಒಂದು ಗಂಟೆ ಅವಧಿಯಲ್ಲಿ ಕೋವಿಡ್-19 ಶಂಕಿತರಿಗೆ ಮತಹಕ್ಕು ಚಲಾಯಿಸಲು ಅವಕಾಶ ನೀಡಲಾಗಿತ್ತು.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.