ಕೊಡಗು: ರಾಜ-ಮಹಾರಾಜರು ಆಳ್ವಿಕೆ ನಡೆಸಿದ ಮಡಿಕೇರಿ ಕೋಟೆಗೆ ಕೊನೆಗೂ ಕಾಯಕಲ್ಪದ ಯೋಗ ಕೂಡಿ ಬಂದಿದೆ. ಅಳಿವಿನಂಚಿನಲ್ಲಿರುವ ಕೋಟೆಯ ನವೀಕರಣಕ್ಕೆ ಇದೀಗ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆ ಮುಂದಾಗಿದೆ.
ಪಾಳು ಬಿದ್ದಿರುವ ಕೋಟೆ. ಅರಮನೆ ಗೋಡೆಯ ಮೇಲೆಲ್ಲಾ ಹಸಿರುಗಟ್ಟಿರುವ ಪಾಚಿ, ಶಿಥಿಲಗೊಂಡಿರುವ ಗೋಡೆಗಳು. ಇಂತಹ ಸ್ಥಿತಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಮಡಿಕೇರಿಯ ಅರಮನೆಯದು. ಸ್ವಾತಂತ್ರ್ಯ ಬಂದಾಗಿನಿಂದ ಈ ಅರಮನೆಯಲ್ಲಿ ಜಿಲ್ಲಾಡಳಿತದ ವಿವಿಧ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದವು. ಇದೀಗ ಬಹುತೇಕ ಕಚೇರಿಗಳನ್ನು ಸ್ಥಳಾಂತರ ಮಾಡಲಾಗಿದ್ದು ಕೆಲವು ಕಚೇರಿಗಳು ಹಾಗೂ ಶಾಸಕರ ಕಚೇರಿಗಳು ಉಳಿದಿವೆ. ಸಾಕಷ್ಟು ಬಾರಿ ಕೋಟೆ ಅಳಿವಿನ ಅಂಚಿಗೆ ತಲುಪಿರುವ ಬಗ್ಗೆ ಮನವರಿಕೆಯನ್ನೂ ಮಾಡಲಾಗಿತ್ತು.
ಶಿಥಿಲಾವಸ್ಥೆ ತಲುಪಿರುವ ಕೋಟೆಯನ್ನು ಸರಿಪಡಿಸುವಂತೆ ಸ್ಥಳೀಯರೊಬ್ಬರು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ, ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ತುರ್ತಾಗಿ ಕೈಗೊಳ್ಳಬೇಕಾದ ಕೆಲಸದ ಬಗ್ಗೆ ಮಾಹಿತಿ ನೀಡುವಂತೆ ಪ್ರಾಚ್ಯವಸ್ತು ಇಲಾಖೆಗೆ ಸೂಚನೆ ನೀಡಿತ್ತು. ನ್ಯಾಯಾಲಯದ ಸೂಚನೆ ಮೇರೆಗೆ ಇಲಾಖೆಯ ಸೂಪರಿಟೆಂಡೆಂಟ್ ಮೂರ್ತೇಶ್ವರಿ ಸೇರಿದಂತೆ ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲಿಸುತ್ತಿದೆ.
ಜಿಲ್ಲಾಡಳಿತ ಅಕ್ಟೋಬರ್ 31 ರ ಒಳಗೆ ಎಲ್ಲಾ ಕಚೇರಿ ಖಾಲಿ ಮಾಡುವುದಾಗಿ ಹೇಳಿದೆ. ಆದರೆ ಅದರೊಳಗೆ ಮಳೆ ಬಂದು ಅರಮನೆ ಕುಸಿದು ಬೀಳುವ ಸಂಭವವಿದ್ದು, ಮೇಲ್ಛಾವಣಿಯನ್ನಾದರೂ ಸರಿಪಡಿಸಲು ಸೂಚನೆ ನೀಡಿ ಎಂದು ಅರ್ಜಿದಾರರು ನ್ಯಾಯಾಲಯದಲ್ಲಿ ಕೇಳಿಕೊಂಡಿದ್ದರು. ಇದೀಗ ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ನ್ಯಾಯಾಲಯಕ್ಕೆ ವರದಿ ನೀಡಲಿದ್ದು, ತುರ್ತಾಗಿ ಆಗಬೇಕಿರುವ ಕಾಮಗಾರಿ ನಡೆಸಲ್ಲಿದ್ದಾರೆ.
ಕೋಟೆಯಲ್ಲಿ ಕೊಡಗಿನ ಸಂಸ್ಕೃತಿ, ರಾಜರ ಆಳ್ವಿಕೆ ಬಿಂಬಿಸುವ ವಸ್ತುಗಳು, ಧ್ವನಿ, ಬೆಳಕು ಹಾಗೂ ಮಡಿಕೇರಿ ಗದ್ದುಗೆಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಲು ಚಿಂತಿಸಲಾಗಿದೆ ಎನ್ನುತ್ತಾರೆ ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ಮೈಸೂರು ವಿಭಾಗದ ಮೇಲ್ವಿಚಾರಕಿ ಮೂರ್ತೇಶ್ವರಿ.
ಕೋರ್ಟ್ ಆದೇಶದಿಂದಲಾದರೂ ಪುರಾತನ ಅರಮನೆಗೆ ನವೀಕರಣದ ಭಾಗ್ಯ ಸಿಗಲಿ. ಮಡಿಕೇರಿಯ ಸುಂದರ ತಾಣಗಳ ಪೈಕಿ ಕೋಟೆ ಕೂಡ ಅಗ್ರಗಣ್ಯ ಸ್ಥಾನ ಪಡೆದರೆ ಪ್ರವಾಸೋದ್ಯಮಕ್ಕೆ ಹೆಸರಾಗಿರುವ ಜಿಲ್ಲೆಯನ್ನು ಮತ್ತಷ್ಟು ಸುಧಾರಿಸಬಹುದು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.