ಸುಂಟಿಕೊಪ್ಪ/ಕೊಡಗು: ಲಾಕ್‌ಡೌನ್ ನಡುವೆಯೂ ಕೊಡಗಿನಲ್ಲಿ ಮದುವೆ ಸಮಾರಂಭಗಳು, ಶುಭ ವಿವಾಹಗಳು ಸರ್ಕಾರದ ಆದೇಶದಂತೆ ಸರಳವಾಗಿ ನೆರವೇರುತ್ತಿವೆ.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಪಿಡಿಒ ವೇಣುಗೋಪಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜ್ಯ ಸರ್ಕಾರವು ಕರ್ಪ್ಯೂ ವಿಧಿಸಿದ್ದರೂ ವಿವಾಹ ಸಮಾರಂಭಕ್ಕೆ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಅವಕಾಶ ನೀಡಿತ್ತು. ಕೇವಲ 50 ಜನರಿಗೆ ಅವಕಾಶ ನೀಡಿ ಅದನ್ನು ಸ್ಥಳೀಯ ಸರ್ಕಾರದ ಉಸ್ತುವಾರಿಗೆ ವಹಿಸಿಕೊಟ್ಟಿತ್ತು.
ಅದರಂತೆ ಪಿಡಿಒ ವೇಣುಗೋಪಾಲ್ ಸ್ಥಳಕ್ಕೆ ಭೇಟಿ ನೀಡಿ, ಮಾಸ್ಕ್ ಧರಿಸುವಂತೆ, ಸ್ಯಾನಿಟೈಸರ್ ಬಳಕೆ , ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದರು.
ಸುಂಟಿಕೊಪ್ಪ ಸಮೀಪದ ಎಮ್ಮೆಗುಂಡಿಯ ಬೀನಾ ಮತ್ತು ಕರಿಕೆಯ ತೇಜಸ್ ಅವರ ವಿವಾಹವು ಸರಳವಾಗಿ ವಧುವಿನ ಸ್ವಗೃಹದಲ್ಲಿ ಭಾನುವಾರ ನೆರವೇರಿತು.
ಅದೇ ರೀತಿ, ಶ್ರೀದೇವಿಯ ಮಲ್ಲನ ಮನಮೋಹನ್ ಮತ್ತು ಭಾಗಮಂಡಲದ ರೇಶ್ಮಾ ಎಂಬುವವರ ವಿವಾಹವು ಬೆರಳೆಣಿಕೆಯ ಸಂಬಂಧಿಕರ ಸಮ್ಮುಖದಲ್ಲಿ ವರನ ಸ್ವಗೃಹದಲ್ಲಿ ನೆರವೇರಿದ್ದು, ಎಲ್ಲರೂ ಮಾಸ್ಕ್ ಧರಿಸಿ ವಿವಾಹ ಮಹೋತ್ಸವದಲ್ಲಿ ಭಾಗವಹಿಸಿದ್ದರು.