ಕುಶಾಲನಗರ (ಕೊಡಗು): ಕೋವಿಡ್ ಅನ್‌ಲಾಕ್ ಮಾರ್ಗಸೂಚಿ 5.0 ಜಾರಿಯಾಗಿ ಹಲವು ದಿನಗಳೇ ಕಳೆದಿವೆ. ಇದರ ಅನ್ವಯ ಉದ್ಯಾನಗಳು, ಪ್ರವಾಸಿ ತಾಣಗಳನ್ನೂ ಕೂಡ ತೆರೆಯಲಾಗಿದೆ. ಆದರೆ, ಪ್ರವಾಸಿ ತಾಣಗಳ ಜಿಲ್ಲೆಯಲ್ಲಿರುವ ಕೊಡಗಿನ ಹಾರಂಗಿ ಉದ್ಯಾನ ಮಾತ್ರ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿಲ್ಲ.
ಹಾರಂಗಿ ಜಲಾಶಯದ ಮುಂಭಾಗ ಇರುವ ವಿಶಾಲವಾದ ಉದ್ಯಾನ ಕೆಆರ್‌ಎಸ್ ಜಲಾಶಯದ ಮುಂಭಾಗದಲ್ಲಿರುವ ಉದ್ಯಾನಕ್ಕಿಂತ ಬೃಹತ್ ಮತ್ತು ಅಷ್ಟೇ ಸುಂದರವಾಗಿದೆ. ಹೀಗಾಗಿಯೇ ಕಳೆದ ಎರಡು ವರ್ಷಗಳಿಂದ ಹಾರಂಗಿ ಉದ್ಯಾನವಕ್ಕೆ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡಿ ಎಂಜಾಯ್ ಮಾಡುತ್ತಿದ್ದರು. ಇನ್ನು ಅಲ್ಲಿರುವ ಅತ್ಯಾಧುನಿಕ ಸಂಗೀತ ಕಾರಂಜಿ ಬರುವ ಸಾವಿರಾರು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತಿತ್ತು. ಆದರೆ, ಕೊರೊನಾದಿಂದ ಎಲ್ಲ ಪ್ರವಾಸಿ ತಾಣಗಳು ಬಂದ್ ಆಗಿದ್ದವು. ಈಗ ಎಲ್ಲ ಪ್ರವಾಸಿ ತಾಣಗಳು ತೆರೆದರೂ ಹಾರಂಗಿ ಉದ್ಯಾನ ಮಾತ್ರ ಇನ್ನೂ ಮುಚ್ಚಿದೆ.
ಹೀಗಾಗಿ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುತ್ತಿರುವ ಪ್ರವಾಸಿಗರು ಉದ್ಯಾನದ ಗೇಟಿನಲ್ಲಿ ನೋ ಎಂಟ್ರಿ ಬೋರ್ಡ್ ನೋಡಿ ಬೇಸರದಿಂದ ವಾಪಸ್ ಆಗುತ್ತಿದ್ದಾರೆ. ಕಳೆದ ಆರೇಳು ತಿಂಗಳಿನಿಂದ ಸಂಗೀತ ಕಾರಂಜಿಗಳು ಬಂದ್ ಆಗಿದ್ದು, ಅವುಗಳು ಕೂಡ ತುಕ್ಕು ಹಿಡಿಯುವ ಸ್ಥಿತಿ ತಲುಪಿವೆ. ಈ ಕುರಿತು ಹಾರಂಗಿ ಇಲಾಖೆ ಅಧಿಕಾರಿಗಳನ್ನು ಕೇಳಿದರೆ, ಆರಂಭದಲ್ಲಿ ಕೆಲವು ದಿನಕಾಲ ಪ್ರವಾಸಿಗರ ಭೇಟಿಗೆ ಅವಕಾಶ ನೀಡಿದ್ದೆವು. ಆದರೆ, ಕೆಆರ್‌ಎಸ್ ಅವೆಲ್ಲವೂ ಮುಚ್ಚಿರುವುದರಿಂದ ನಾವು ಮುಚ್ಚಿದ್ದೇವೆ ಎನ್ನೋ ಸಲ್ಲದ ಉತ್ತರ ನೀಡುತ್ತಿದ್ದಾರೆ.
ಇನ್ನು ಕೊರೊನಾದಿಂದ ಮಾರ್ಚ್ ತಿಂಗಳಿನಿಂದಲೇ ಲಾಕ್ಡೌನ್ ಆಗಿದ್ದರಿಂದ ಅಂದಿನಿಂದ ಆರ್ಥಿಕವಾಗಿ ನಾವು ಸಂಪೂರ್ಣ ಕುಗ್ಗಿ ಹೋಗಿದ್ದೇವೆ. ಸರ್ಕಾರವೇ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತಿದ್ದರೂ, ಹಾರಂಗಿ ಇಲಾಖೆ ಅಧಿಕಾರಿಗಳು ಮಾತ್ರ ಪ್ರೋತ್ಸಾಹಿಸುತ್ತಿಲ್ಲ. ಪ್ರವಾಸಿ ತಾಣಗಳಲ್ಲಿ ಚಿಕ್ಕಪುಟ್ಟ ವ್ಯಾಪಾರ ಮಾಡಿಕೊಂಡು ಬದುಕುತ್ತಿದ್ದ ನಾವು, ಉದ್ಯಾನ ಮುಚ್ಚಿರುವುದರಿಂದ ಪ್ರವಾಸಿಗರು ಇಲ್ಲದೇ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ವ್ಯಾಪಾರಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಒಟ್ಟಿನಲ್ಲಿ ಸರ್ಕಾರವೇ ಪ್ರವಾಸಿತಾಣಗಳನ್ನು ಓಪನ್ ಮಾಡಿದ್ದರೂ ಹಾರಂಗಿ ಅಧಿಕಾರಿಗಳು ಮಾತ್ರ ಸರ್ಕಾರದ ನಿಯಮಕ್ಕೂ ಕಿಮ್ಮತ್ತು ನೀಡಿಲ್ಲ.