ಕೊಡಗು: ಚಟ್ಟದ ಮೇಲೆ ನಗರಸಭೆ ಅಧಿಕಾರಿಯ ಅಣಕು ಶವವಿಟ್ಟು, ಪಟಾಕಿ ಹಚ್ಚಿ, ತಮಟೆ ಶಬ್ಧಕ್ಕೆ ಅಯ್ಯೊಯ್ಯೋ ಎಂದು ಬಾಯಿ ಬಡಿದುಕೊಳ್ಳುತ್ತಾ ನಗರದ ಪ್ರಮುಖ ಬೀದಿಗಳಲ್ಲಿ ಶವಯಾತ್ರೆ ಮಾಡುವ ಮೂಲಕ ಕಸ ವಿಲೇವಾರಿ ಮಾಡದ ನಗರಸಭೆ ವಿರುದ್ಧ ವಿನೂತನಾಗಿ ಪ್ರತಿಭಟಿಸಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಮಂಜಿನ ನಗರಿ ಮಡಿಕೇರಿ ನಗರಸಭೆ ಕಸದ ಸಮಸ್ಯೆ ಬಗೆ ಹರಿಸುವಲ್ಲಿ ವಿಫಲವಾಗಿರುವುದನ್ನು ಖಂಡಿಸಿ ಮಡಿಕೇರಿ ಹಿತ ರಕ್ಷಣಾ ವೇದಿಕೆ ನಗರಸಭೆ ಆಯುಕ್ತರ ಅಣಕು ಶವ ಪ್ರದರ್ಶಿಸಿ ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು. ಕೊಡಗು ಪ್ರಕೃತಿ ಸೌಂದರ್ಯದಿಂದ ಕೂಡಿರುವ ಜಿಲ್ಲೆ. ಇತ್ತೀಚಿನ ದಿನಗಳಲ್ಲಿ ನಗರಗಳು ಬೆಳೆದಂತೆ ಹಲವಾರು ಸಮಸ್ಯೆಗಳು ಉಲ್ಭಣಿಸುತ್ತಿವೆ. ನಿತ್ಯ ನಗರದ 23 ವಾರ್ಡ್‌ಗಳಿಂದ ಸಂಗ್ರಹಿಸುತ್ತಿರುವ ಕಸವನ್ನು ವೈಜ್ಞಾನಿಕ ರೀತಿ ವಿಂಗಡಿಸಿ ವಿಲೇವಾರಿ ಮಾಡುವಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಘನ ತ್ಯಾಜ್ಯ ವಿಂಗಡಿಸುವ ಯಂತ್ರೋಪಕರಣಗಳು ದುಸ್ಥಿತಿಯಲ್ಲಿದ್ದು, ತುಕ್ಕು ಹಿಡಿಯುತ್ತಿವೆ. ಇದರಿಂದ ಪ್ರವಾಸಿಗರು ಸೇರಿ ಸ್ಥಳೀಯರಿಗೂ ಕಿರಿ ಕಿರಿಯಾಗುತ್ತಿದೆ. ಹೋಟೆಲ್ ಹಾಗೂ ರೆಸಾರ್ಟ್‌ಗಳ ತ್ಯಾಜ್ಯವೆಲ್ಲ ನಗರದಿಂದ ಕೊಂಚವೇ ದೂರದಲ್ಲಿರುವ ಸ್ಟೋನ್‌ಹಿಲ್ ಬೆಟ್ಟದಲ್ಲಿ ಸಂಗ್ರಹವಾಗಿ ಕಸದ ರಾಶಿಯ ಗಾತ್ರ ಹೆಚ್ಚುತ್ತಿದ್ದರೂ ನಗರಸಭೆ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.