ಕೊಡಗು: ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ನಲ್ಲೂರು ಗ್ರಾಮದಲ್ಲಿ ಅನೇಕ ಎಕರೆ ದೇವರ ಕಾಡುಗಳಿವೆ. ಇದೀಗ ಈ ಅರಣ್ಯವನ್ನು ಕಾಪಾಡಲು, ಬೆಳೆಸಲು ಇಲ್ಲಿನ ಜನರು ಪಣತೊಟ್ಟಿದ್ದಾರೆ. ಶತಮಾನಗಳಿಂದಲೇ ಈ ಕಾಡುಗಳನ್ನು ಪ್ರತಿ ಊರು ಊರುಗಳಲ್ಲಿ ಜನರು ಪಾಲನೆ ಪೋಷಣೆ ಮಾಡಿಕೊಂಡು ಬಂದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ದೇವರ ಕಾಡುಗಳು ನಾಶವಾಗುತ್ತಿವೆ. ಜೊತೆಗೆ ಅತಿಕ್ರಮಣವೂ ಆಗುತ್ತಿವೆ.
ಈ ಹಿನ್ನೆಲೆಯಲ್ಲಿ ತಮ್ಮ ಊರಿನ ದೇವರ ಕಾಡುಗಳನ್ನು ಉಳಿಸಬೇಕು ಎಂಬ ಉದ್ದೇಶದಿಂದ ಕೊಡವ ರೈಡರ್ಸ್ ಕ್ಲಬ್, ರೈತ ಸಂಘ ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ. ನಲ್ಲೂರು ಗ್ರಾಮಸ್ಥರೆಲ್ಲ ಸೇರಿ ಅರಣ್ಯ ಇಲಾಖೆ ಸಹಯೋಗದಿಂದ ನೂರಾರು ಬಗೆಯ ಕಾಡು ಗಿಡಗಳನ್ನು ತಂದಿಲ್ಲಿ ನೆಟ್ಟಿದ್ದಾರೆ.
ದೇವರ ಕಾಡಿನಲ್ಲಿ ಕೇವಲ ಗಿಡಗಳನ್ನು ನೆಡುವುದು ಮಾತ್ರವಲ್ಲದೆ, ಸ್ಥಳೀಯ ಯುವಜನರನ್ನೂ ಇಲ್ಲಿಗೆ ಆಹ್ವಾನಿಸಿ ಅವರಿಗೆ ದೇವರ ಕಾಡಿನ ಮಹತ್ವ ತಿಳಿಹೇಳಿದ್ದಾರೆ. ಕೊಡಗಿನ ದೇವರಕಾಡುಗಳನ್ನು ಏಕೆ ಉಳಿಸಿ ಬೆಳೆಸಬೇಕು ಎಂಬುದರ ಬಗ್ಗೆಯೂ ಮನವರಿಕೆ ಮಾಡಿದ್ದಾರೆ. ಕೊಡಗಿನ ಬಹುತೇಕ ಎಲ್ಲಾ ಗ್ರಾಮಗಳಲ್ಲೂ ದೇವರ ಕಾಡುಗಳಿವೆ. ಅಲ್ಲಿಗೆ ಮಾನವ ಪ್ರವೇಶ ನಿಷೇಧಿಸಲಾಗಿದೆ. ಇನ್ನು ಅರಣ್ಯ ಇಲಾಖೆಯ ಭಯಕ್ಕಿಂತ ದೇವರ ಮೇಲಿನ ಭಕ್ತಿಯಿಂದಲೇ ಗ್ರಾಮಸ್ಥರು ಈ ಕಾಡನ್ನು ಉಳಿಸಿಕೊಂಡು ಬರುತ್ತಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಕಾಣಸಿಗುವ ಹಲವು ಎಕರೆಗಳಷ್ಟಿರುವ ಈ ದೇವರ ಕಾಡುಗಳು ನಿತ್ಯ ಹರಿದ್ವರ್ಣ ಕಾಡುಗಳಾಗಿ ಉಳಿದಿವೆ. ಇದನ್ನು ಉಳಿಸಿ ಬೆಳೆಸಲು ಇಲ್ಲಿನ ಜನರು ಮುಂದಾಗಿರುವುದು ಶ್ಲಾಘನೀಯ ಸಂಗತಿ.