ಕೊಡಗು: ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಗಾಳಿ ಮಳೆಯಿಂದ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಮತ್ತಷ್ಟು ಹೆಚ್ಚಳವಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ನಾಪೋಕ್ಲುವಿನಿಂದ ಮೂರ್ನಾಡು ಸಂಪರ್ಕ ಕಲ್ಪಿಸುವ ಬೊಳಿಬಾಣೆ ಎಂಬಲ್ಲಿ ರಸ್ತೆಯಲ್ಲಿ 5 ಅಡಿಗಳಷ್ಟು ಪ್ರವಾಹ ಹೆಚ್ಚಾಗಿದೆ.
ಕೊಟ್ಟಮುಡಿ ಜಂಕ್ಷನ್ ಬಳಿಯಲ್ಲಿ ಕಾಫಿ ತೋಟಗಳಿಗೆ ಕಾವೇರಿ ನದಿ ನೀರಿನ ಪ್ರವಾಹ ಬಂದಿದೆ. ಕೇವಲ 3ರಿಂದ 4 ಅಡಿಗಳಷ್ಟು ಪ್ರವಾಹ ಬಂದರೆ ನಾಪೋಕ್ಲು ಮಾರ್ಗವಾಗಿ ಕೊಟ್ಟಮುಡಿ ಮಡಿಕೇರಿ ಸಂಪರ್ಕಿಸುವ ಮುಖ್ಯರಸ್ತೆ ಸಂಪರ್ಕ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಚೆರಿಯಪರಂಬು- ಕಲ್ಲುಮೊಟ್ಟೆ ಹೋಗುವ ರಸ್ತೆಯಲ್ಲೂ ಕಾವೇರಿ ನದಿ ಪ್ರವಾಹ ಹೆಚ್ಚಳವಾಗಿದ್ದು, ಜನರಲ್ ತಿಮ್ಮಯ್ಯ ಕ್ರೀಡಾಂಗಣದ ಮೈದಾನ ಜಲಾವೃತಗೊಂಡಿದೆ. ಈ ಗ್ರಾಮದ ರಸ್ತೆಗಳಲ್ಲಿ ಸುಮಾರು 6 ಅಡಿಗಳಷ್ಟು ಪ್ರವಾಹ ಬಂದಿದ್ದು, ಪ್ರವಾಹ ಮತ್ತಷ್ಟು ಹೆಚ್ಚಾಗುವ ಆತಂಕ ಸೃಷ್ಟಿಯಾಗಿದೆ.
ನಾಲ್ಕುನಾಡು ವ್ಯಾಪ್ತಿಗೆ ಒಳಪಡುವ ಕಕ್ಕಬ್ಬೆ ಗ್ರಾಮ ವ್ಯಾಪ್ತಿಯ ಫೈನರಿ ದರ್ಗಾಕ್ಕೆ ಹೋಗುವ ರಸ್ತೆ, ಎಮ್ಮೆಮಾಡು -ಕೂರುಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಕೈಕಾಡು, ಪಾರಾಣೆ ಸಂಪರ್ಕಿಸುವ ಎತ್ತುಕಡು ರಸ್ತೆ ಹಾಗೂ ಸಮೀಪದ ಎಡಪಾಲ ಕಡಂಗ ಮಾರ್ಗವಾಗಿ ವಿರಾಜಪೇಟೆ ಹೋಗುವ ರಸ್ತೆಯ ಅರಪಟ್ಟು ಎಂಬಲ್ಲಿ ರಸ್ತೆ ಮೇಲೆ ನದಿ ಪ್ರವಾಹ ಬಂದು, ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ನಾಪೋಕ್ಲು ಸುತ್ತಮುತ್ತ ಮಳೆಯ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 6 ಇಂಚಿಗೂ ಅಧಿಕ ಮಳೆಯಾಗಿದೆ. ಇದರಿಂದ ನಾಪೋಕ್ಲು ವ್ಯಾಪ್ತಿಯಲ್ಲಿ ಎಲ್ಲಾ ನದಿ ತೊರೆ ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಕಾವೇರಿ ನದಿ ಅಪಾಯದ ಮಟ್ಟ ತಲುಪಿದೆ. ಮಳೆ ಇದೇ ರೀತಿ ಮುಂದುವರಿದರೆ ನಾಪೋಕ್ಲು ನಗರ ಎಲ್ಲಾ ಕಡೆಗಳಿಂದ ಸಂಪರ್ಕ ಕಡಿತಗೊಳ್ಳುವ ಭೀತಿಯಲ್ಲಿದೆ.
ಕಾವೇರಿ ನದಿ ತೀರ ಪ್ರದೇಶದ ಸಿದ್ದಪುರ ಭಾಗದ ಗುಹ್ಯ, ಕರಡಿಗೋಡು, ಭಾಗದಲ್ಲಿ ನೀರು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ರಸ್ತೆ ಮೇಲೆ ನೀರು ಹರಿಯುತ್ತಿದ್ದು, ರಸ್ತೆ ಸಂಪರ್ಕ ಕಡಿತವಾಗಿದೆ. ಮಳೆ ಹೆಚ್ಚಾದರೆ ಮನೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ. ಗುಹ್ಯಗ್ರಾಮದಲ್ಲಿ ಆಟದ ಮೈದಾನಕ್ಕೆ ನೀರು ನುಗ್ಗಿದೆ. ನೀರು ತುಂಬಿದ ಮೈದಾನದಲ್ಲೇ ಯುವಕರು ವಾಲಿಬಾಲ್ ಆಟವಾಡುತ್ತಿದ್ದಾರೆ.
ಇದನ್ನೂ ಓದಿ : ತುಮಕೂರು: ತೋಟಕ್ಕೆ ನುಗ್ಗಿದ ಕೆರೆ ನೀರು, ನೂರಾರು ಎಕರೆ ಅಡಕೆ ಬೆಳೆ ನಾಶ