ತಲಕಾವೇರಿ: ಯಾರದೋ ಕೆಲವರ ಮಾತು ಕೇಳಿ ಅರಣ್ಯ ಇಲಾಖೆ ಅಧಿಕಾರಿಗಳು ಮಾಡಿದ ತಪ್ಪಿಗೆ, ಕನ್ನಡ ನಾಡಿನ ಜೀವನದಿ ಕಾವೇರಿ ಹರಿಯುವ ದಿಕ್ಕು ಬದಲಿಸಿ ಬಿಡುತ್ತಾಳಾ ಎನ್ನುವ ಆತಂಕ ಶುರುವಾಗಿದೆ.
ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನಲ್ಲಿ ಹುಟ್ಟಿ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಹರಿದು, ಬಂಗಾಳಕೊಲ್ಲಿ ಸೇರುವ ಕಾವೇರಿ ನದಿಯ ಉಗಮಸ್ಥಾನವಾದ ಬ್ರಹ್ಮಗಿರಿ ಮತ್ತು ಗಜಗಿರಿ ಬೆಟ್ಟದಲ್ಲಿ 2017 ರಲ್ಲಿ 300 ಕ್ಕೂ ಹೆಚ್ಚು ಇಂಗು ಗುಂಡಿಗಳನ್ನು ತೆಗೆಯಲಾಗಿತ್ತು. ಪರಿಣಾಮ 2018 ರಲ್ಲಿ ಭಾರಿ ಪ್ರಮಾಣದಲ್ಲಿ ಬಿರುಕುಬಿಟ್ಟಿದ್ದ ಗಜಗಿರಿ ಬೆಟ್ಟ, 2020ರ ಆಗಸ್ಟ್ ತಿಂಗಳಲ್ಲಿ ಬಹುತೇಕ ಕುಸಿದು ಬಿದ್ದಿತ್ತು.
ಬ್ರಹ್ಮಗಿರಿ ಮತ್ತು ಗಜಗಿರಿ ಬೆಟ್ಟದಲ್ಲಿ ಇನ್ನೂ ನೂರಾರು ಇಂಗು ಗುಂಡಿಗಳು ಹಾಗೇ ಇದ್ದು, ಗಜಗಿರಿ ಬೆಟ್ಟ ಮುಂದಿನ ಮಳೆಗಾಲದಲ್ಲಿ ಮತ್ತೆ ಕುಸಿದು ಬೀಳುವುದರಲ್ಲಿ ಅನುಮಾನವಿಲ್ಲ. ಅಷ್ಟೇ ಅಲ್ಲ ಬ್ರಹ್ಮಗಿರಿ ಬೆಟ್ಟದಲ್ಲಿಯೂ ಇಂಗು ಗುಂಡಿಗಳಿದ್ದು, ಒಂದು ವೇಳೆ ಅದು ಕುಸಿದಿದ್ದೇ ಆದಲ್ಲಿ ಕಾವೇರಿ ನದಿಯ ಮೂಲವೇ ಬತ್ತಿ ಹೋಗುವ ಸಾಧ್ಯತೆ ಇದೆ. ಇಲ್ಲವೇ ಬ್ರಹ್ಮಗಿರಿ ಬೆಟ್ಟ ಮಂಡ್ರೂಟ್ ಭಾಗಕ್ಕೆ ಕುಸಿದಿದ್ದೇ ಆದಲ್ಲಿ ಕಾವೇರಿ ನದಿ ಕನ್ನಡ ನಾಡಿನಲ್ಲಿ ಹರಿಯುವ ಬದಲು ಕೇರಳ ಭಾಗಕ್ಕೆ ಹರಿಯುವ ಸಾಧ್ಯತೆ ಇದೆ ಎನ್ನುವುದು ಪರಿಸರವಾದಿಗಳ ಆತಂಕ.
ಇದನ್ನೂ ಓದಿ: ಬ್ರಹ್ಮಗಿರಿ ಬೆಟ್ಟ ಕುಸಿತ: ಕೊಳೆತ ಸ್ಥಿತಿಯಲ್ಲಿ ಅರ್ಚಕರ ಶವ ಪತ್ತೆ, ಉಳಿದ ನಾಲ್ವರಿಗೆ ತೀವ್ರ ಶೋಧ
ಅಷ್ಟಕ್ಕೂ ತಲಕಾವೇರಿಯಲ್ಲಿ ಜಲಮೂಲಗಳು ಬತ್ತಿಹೋಗುತ್ತಿದ್ದು, ಒರತೆ ಕಡಿಮೆಯಾಗಿದೆ. ಹೀಗಾಗಿ ಅರಣ್ಯ ಇಲಾಖೆ ಬ್ರಹ್ಮಗಿರಿ ಮತ್ತು ಗಜಗಿರಿ ಬೆಟ್ಟಗಳಲ್ಲಿ ಇಂಗು ಗುಂಡಿಗಳನ್ನು ತೆಗೆಯಬೇಕು. ಜೊತೆಗೆ ಗಿಡಗಳನ್ನು ನೆಟ್ಟು ಅರಣ್ಯ ಬೆಳೆಸುವಂತೆ ಸರ್ಕಾರಕ್ಕೆ ಕಾವೇರಿ ಹಿತ ರಕ್ಷಣಾ ಸಮಿತಿಯ ಎಂ.ಬಿ. ದೇವಯ್ಯ ಅವರು ಈ ಕುರಿತು 2015 ರ ನವೆಂಬರ್ ತಿಂಗಳಲ್ಲಿ ಪತ್ರ ಬರೆದಿದ್ದಾರೆ. ಸರ್ಕಾರ ಕೂಡ ಇದಕ್ಕೆ ಒಪ್ಪಿ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಸೂಚಿಸಿದೆ.
ಹೀಗಾಗಿ 2017 ರಲ್ಲಿ ಕೊಡಗಿನ ಅರಣ್ಯ ಇಲಾಖೆ ತಲಕಾವೇರಿಯ ಬ್ರಹ್ಮಗಿರಿ ಮತ್ತು ಗಜಗಿರಿ ಬೆಟ್ಟದಲ್ಲಿ ಜೆಸಿಬಿಯನ್ನು ಬಳಸಿ 13 ಅಡಿ ಉದ್ದ, 5 ಅಡಿ ಅಗಲ ಮತ್ತು 6 ಅಡಿ ಆಳದ 300 ಕ್ಕೂ ಹೆಚ್ಚು ಗುಂಡಿಗಳನ್ನು ತೆಗೆದಿತ್ತು. ಇದೇ ಕಾರಣದಿಂದಲೇ 2018 ರಲ್ಲಿ ಗಜಗಿರಿ ಬೆಟ್ಟ ಬಹುತೇಕ ಬಿರುಕು ಬಿಟ್ಟಿತ್ತು. 2020 ರ ಆಗಸ್ಟ್ ನಲ್ಲಿ ಭಾರೀ ಪ್ರಮಾಣದಲ್ಲಿ ಕುಸಿದು ಅರ್ಚಕ ನಾರಾಯಣ ಆಚಾರ್ ಅವರ ಕುಟುಂಬವನ್ನು ಬಲಿ ಪಡೆದಿತ್ತು. ಗಜಗಿರಿ ಮತ್ತು ಬ್ರಹ್ಮಗಿರಿ ಬೆಟ್ಟದಲ್ಲಿ ಎರಡು ಹಂತದಲ್ಲಿ ಇಂಗು ಗುಂಡಿಗಳನ್ನು ತೆಗೆಯಲಾಗಿದೆ.
ಇದನ್ನೂ ಓದಿ: ಬ್ರಹ್ಮಗಿರಿಯ ಗಜಗಿರಿಬೆಟ್ಟ ಕುಸಿತ ಪ್ರಕರಣ: ಕಣ್ಮರೆಯಾದವರಿಗೆ ಒಂಬತ್ತು ದಿನಗಳಿಂದ ಶೋಧ..!
ಈಗ ಬೆಟ್ಟ ಕುಸಿದಿರುವುದು ಮೊದಲ ಹಂತದಲ್ಲಿ ತೆಗೆದಿದ್ದ ಇಂಗು ಗುಂಡಿಗಳ ಜಾಗದಿಂದ. ಇದಕ್ಕಿಂತ ಮೇಲಿನ ಹಂತದಲ್ಲಿ ತೆಗೆದಿದ್ದ ಗುಂಡಿಗಳು ಈಗಲೂ ಹಾಗೆ ಇವೆ. ಆಗಸ್ಟ್ ತಿಂಗಳಲ್ಲಿ ಬೆಟ್ಟ ಕುಸಿದಾಗ ಇಂಗು ಗುಂಡಿಗಳೇ ಕಾರಣ ಎಂದು ಸಾಕಷ್ಟು ಚರ್ಚೆಯಾಗಿತ್ತು. ಹೀಗಾಗಿ ಮಳೆ ಕಡಿಮೆಯಾಗುತ್ತಿದ್ದಂತೆ ಅರಣ್ಯ ಇಲಾಖೆ ಕೆಲವು ಇಂಗುಗುಂಡಿಗಳನ್ನು ಮಾತ್ರವೇ ಮುಚ್ಚಿದೆ. ಇನ್ನು ನೂರಾರು ಗುಂಡಿಗಳು ಹಾಗೇ ಇವೆ.
ಇದನ್ನೂ ಓದಿ: ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರಕರಣ: ಕಣ್ಮರೆಯಾದ ಕುಟುಂಬಕ್ಕೆ ಸೇರಿದ ಎರಡು ಕಾರುಗಳು ಪತ್ತೆ!