ಕೊಡಗು: ಮಳೆ ಬಂದ್ರೆ ಸಾಕು ಅಲ್ಲಿನ ಮಂದಿ ಜೀವವನ್ನ ಕೈಯಲ್ಲಿ ಹಿಡಿದು ಬದುಕುವ ಸ್ಥಿತಿ. ಯಾವಾಗ ಮನೆ ಮೇಲೆ ಬೆಟ್ಟ ಕುಸಿಯುತ್ತೋ ಅನ್ನೋ ಆತಂಕ. ಇಂತಹ ಪರಿಸ್ಥಿತಿಯಲ್ಲಿಯೂ ಕೂಡ ಕೆಲವರು ಮನೆ ಖಾಲಿ ಮಾಡಿ ಸುರಕ್ಷಿತ ಸ್ಥಳಕ್ಕೆ ಹೋಗಲ್ಲ ಅಂತಾ ಪಟ್ಟು ಹಿಡಿದಿದ್ದಾರೆ.
ಇದು ಕೊಡಗು ಜಿಲ್ಲೆ ಸೋಮವಾರ ಪೇಟೆ ತಾಲೂಕಿನ ಉದಗೀರಿ ಗ್ರಾಮ. 2018ರ ಪ್ರಕೃತಿ ವಿಕೋಪಕ್ಕೆ ತುತ್ತಾದ ಗ್ರಾಮ. ಇಲ್ಲಿನ ಏಳು ಮನೆಗಳು ಅಪಾಯದಲ್ಲಿದ್ದು, ಜಿಲ್ಲಾಡಳಿತ ನೋಟಿಸ್ ನೀಡಿ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ತಿಳಿಸಿದೆ. ಆದ್ರೆ ನಾವು ಮನೆ ಖಾಲಿ ಮಾಡಲ್ಲ ಅಂತಾ ಸ್ಥಳೀಯರು ಹೇಳುತ್ತಿದ್ದಾರೆ.
ಸ್ಥಳೀಯರ ಅಳಲು:
ಮಳೆ ಶುರುವಾದ್ರೆ ನಮಗೆ ಆತಂಕ ಶುರುವಾಗುತ್ತೆ. ಅಪಾಯದಲ್ಲಿರುವ ನಮಗೆ ಸರಿಯಾದ ಮನೆ ನಿರ್ಮಾಣ ಮಾಡಿ ಕೊಡಿ ಅಂತ ಸಂಬಂಧಿತ ಅಧಿಕಾರಿಗಳಿಗೆ ಒತ್ತಾಯ ಮಾಡುತ್ತಲೇ ಇದ್ದೇವೆ. ಆದ್ರೆ ಮೂರು ವರ್ಷಗಳಿಂದ ಅವರು ಮಳೆಗಾಲದಲ್ಲಿ ನೋಟಿಸ್ ಕೊಡ್ತಾರೆ ಹೊರತು, ಶಾಶ್ವತ ಪರಿಹಾರ ಮಾತ್ರ ಕೊಟ್ಟಿಲ್ಲ. ನಮಗೆ ಸೂರು ಕೊಡಿ, ಇಲ್ಲಾ ಅಂದ್ರೆ ಏನೇ ಆದ್ರೂ ನಾವು ಮನೆ ಬಿಟ್ಟು ಹೋಗಲ್ಲ ಅಂತಿದ್ದಾರೆ ಸ್ಥಳೀಯರು.
ಇನ್ನೂ 2018ರಲ್ಲಿ ಭೂಕುಸಿತವಾದ ಸ್ಥಳದ ಕೆಳಭಾಗದಲ್ಲೇ ಕೃತಕ ಕೆರೆ ಸೃಷ್ಟಿಯಾಗಿದೆ. ಬೆಟ್ಟದಿಂದ ಬರೋ ನೀರು ಅಲ್ಲೇ ಸಂಗ್ರಹವಾಗಿ ಬೃಹತ್ ಕರೆಯಂತಾಗಿದೆ. ಈ ಕೆರೆಯ ಸಮೀಪ ಹಲವು ಮನೆಗಳಿದ್ದು ಎಲ್ಲರೂ ಜೀವ ಭಯದಲ್ಲಿ ಬದುಕುವಂತಾಗಿದೆ.
ಮಳೆಗಾಲ ಬಂದಾಗ ನಮಗೆ ನೋಟಿಸ್ ಕೊಡುವ ಬದಲು ಶಾಶ್ವತ ಪರಿಹಾರ ಒದಗಿಸಿ. ಇಲ್ಲವಾದ್ರೆ ಏನೇ ಆಗ್ಲಿ ಮನೆ ಮಾತ್ರ ಖಾಲಿ ಮಾಡಲ್ಲ ಅಂತಿದಾರೆ ಇಲ್ಲಿನ ನಿವಾಸಿಗಳು. ಮಳೆಗಾಲದಲ್ಲಿ ಮಾತ್ರ ಎಚ್ಚೆತ್ತುಕೊಳ್ಳುವ ಅಧಿಕಾರಿಗಳು, ಜನಪ್ರತಿನಿಧಿಗಳು ಇವರಿಗೆ ಸೂಕ್ತ ಪರಿಹಾರ ಒದಗಿಸುವತ್ತ ಗಮನ ಹರಿಸಬೇಕಿದೆ.