ಕೊಡಗು: ಶಿಕ್ಷಕರಿಗೆ ಸಮಾಜದಲ್ಲಿ ಶ್ರೇಷ್ಠ ಸ್ಥಾನವಿದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಗುರುತರ ಜವಾಬ್ದಾರಿ ಅವರ ಮಹತ್ವದ ಹೊಣೆಗಾರಿಕೆ. ಆದರೆ, ಕೊರೊನಾದಿಂದಾಗಿ ರಾಜ್ಯದಲ್ಲಿ ಉಪನ್ಯಾಸಕರ ಭವಿಷ್ಯಕ್ಕೆ ಕತ್ತಲು ಆವರಿಸಿದೆ. ಪರಿಣಾಮ ಕೊಡಗಿನ ಅತಿಥಿ ಉಪನ್ಯಾಸಕರು ಈಗ ಇಲ್ಲಿನ ತೋಟದ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.
ಜಿಲ್ಲೆಯಲ್ಲಿ 115 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರಿದ್ದಾರೆ. ಕೊರೊನಾ ನಿಯಂತ್ರಿಸಲು ಸರ್ಕಾರ ಮಾರ್ಚ್‌ನಲ್ಲಿ ದೇಶವನ್ನು ಲಾಕ್‌ಡೌನ್ ಮಾಡಿತು. ಪರಿಣಾಮ, ಜುಲೈ ತಿಂಗಳಿನಿಂದ ಆರಂಭವಾಗಬೇಕಾಗಿದ್ದ ಕಾಲೇಜುಗಳು ಇಂದಿಗೂ ತೆರೆದಿಲ್ಲ. ಹೀಗಾಗಿ ಅತಿಥಿ ಉಪನ್ಯಾಸಕರ ಜೀವನ ಅತಂತ್ರವಾಗಿದೆ. ಅವರು ಅನ್ಯ ದಾರಿ ಕಾಣದೆ ಕಾಫಿ ತೋಟಗಳಲ್ಲಿ ಹಣ್ಣು ಬಿಡಿಸುವ ಕೆಲಸ ಮಾಡುತ್ತಿದ್ದಾರೆ.
ಕೊಡಗಿನ ಬಹುತೇಕ ಉಪನ್ಯಾಸಕರು ಮಧ್ಯಮ ಮತ್ತು ಬಡ ಕುಟುಂಬಗಳಿಂದ ಬಂದವರಾಗಿದ್ದು, ಈಗ ಶಾಲಾ- ಕಾಲೇಜುಗಳು ಇಲ್ಲದಿರುವುದರಿಂದ ಕಾಫಿ ತೋಟಗಳಲ್ಲಿ ಕಾರ್ಮಿಕರಾಗಿದ್ದಾರೆ. ತೋಟದ ಕಾರ್ಮಿಕರು ಹೊಸದಾಗಿ ತೋಟಗಳಿಗೆ ಕೂಲಿ ಕೆಲಸಕ್ಕೆ ಹೋಗುತ್ತಿರುವ ಉಪನ್ಯಾಸಕರಿಗೆ ಕೆಲಸ ಹೇಳಿ ಕೊಡುತ್ತಿದ್ದಾರೆ.
ಒಂದೆಡೆ ಕಳೆದ ವರ್ಷದ ಸಂಬಳವನ್ನೇ ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ. ಹೀಗಾಗಿ ಇವರಿಗೆ ತಮ್ಮ ಸಂಸಾರಗಳನ್ನು ಸಾಕುವುದು ಕಷ್ಟಕರವಾಗಿದೆ. ಮತ್ತೊಂದೆಡೆ, ಜುಲೈ ತಿಂಗಳಲ್ಲಿ ಆರಂಭವಾಗಬೇಕಾಗಿದ್ದ ಕಾಲೇಜುಗಳು ಕೊರೊನಾದಿಂದಾಗಿ ಅಕ್ಟೋಬರ್ ಮುಗಿಯುತ್ತಾ ಬಂದ್ರೂ ಇಂದಿಗೂ ತೆರೆದಿಲ್ಲ. ಹೀಗಾಗಿ ಬೇರೆ ದಾರಿಯಿಲ್ಲದೆ, ನಮ್ಮ ಸ್ವಾಭಿಮಾನವನ್ನು ಬದಿಗಿಟ್ಟು ತೋಟಗಳಿಗೆ ಹೋಗಿ ದುಡಿಯುತ್ತಿದ್ದೇವೆ ಎನ್ನುತ್ತಿದ್ದಾರೆ ಉಪನ್ಯಾಸಕರು.