ಮಡಿಕೇರಿ: ಭೂ ಕುಸಿತಕ್ಕೆ ಸಿಲುಕಿ ಮೃತಪಟ್ಟವರಲ್ಲಿ ತಾಯಿ ಹಾಗೂ ಮಗುವಿನ ಮತದೇಹಗಳು ಸಿಕ್ಕಿವೆ. ಇನ್ನೂ ಹಲವು ಕುಟುಂಬಗಳು ಬೆಟ್ಟದಡಿ ಸಿಲುಕಿರುವ ಕುರಿತು ಸ್ಥಳೀಯರು ಶಂಕಿಸಿದ್ದಾರೆ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ವಿರಾಜಪೇಟೆ ತಾಲೂಕಿನ ತೋರಾ ಗ್ರಾಮದಲ್ಲಿ ಶನಿವಾರ ಸಂಭವಿಸಿದ್ದ ಭೂ ಕುಸಿತ ಸ್ಥಳಕ್ಕೆ ಭೇಟಿ ನೀಡಿದ್ದ ಅವರು, ಮಾಧ್ಯಮದವರೊಂದಿಗೆ ಮಾತನಾಡಿದರು. ನಿರಂತರ ಸುರಿಯುತ್ತಿರುವ ಮಳೆಗೆ ತೋರಾ ಗ್ರಾಮದಲ್ಲಿ ಡೊಡ್ಡ ಬೆಟ್ಟ ಕುಸಿದು ಗ್ರಾಮವನ್ನೇ ಆವರಿಸಿದೆ. ಈ ಸಂದರ್ಭದಲ್ಲಿ 10-12 ಕುಟುಂಬಗಳ ಕೆಲ ಸದಸ್ಯರು ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಇನ್ನೂ ಹಲವರು ಅಲ್ಲೆಯೇ ಸಿಲುಕಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದರು.
ಏನೇ ಆದರೂ ಪ್ರಕೃತಿಯ ಆಟದ ಮುಂದೆ ಮನುಷ್ಯನ ಪ್ರಯತ್ನಗಳೆಲ್ಲವೂ ವ್ಯರ್ಥ. ತೋರಾ ಗ್ರಾಮಕ್ಕೆ ಹೋಗಲು ಆಗದ ಪರಿಸ್ಥಿತಿ ಇದೆ. ಮೊಣಕಾಲು ಉದ್ದಕ್ಕೂ ಕೆಸರು ತುಂಬಿದೆ. ಇಂತಹ ಪರಿಸ್ಥಿತಿಯಲ್ಲೇ 4 ಕಿ.ಮೀ ಹೋಗಿ ತಾಯಿ-ಮಗುವಿನ ಮೃತ ದೇಹಗಳನ್ನು ಹೊರಕ್ಕೆ ತರಲಾಗಿದೆ. ಈಗಾಗಲೇ ನಿರಾಶ್ರಿತರನ್ನು ಸಮೀಪದ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತಿದೆ. 3 ಜೆಸಿಬಿ ಯಂತ್ರಗಳಿಂದ ಪರ್ಯಾಯ ರಸ್ತೆ ಕಲ್ಪಿಸಲಾಗಿದೆ. ರಾಜ್ಯ ಸರ್ಕಾರ ಸದಾ ನಿಮ್ಮೊಂದಿಗೆ ಇದೆ. ಯಾವುದೇ ಕಾರಣಕ್ಕೂ ಆತಂಕ ಪಡಬೇಡಿ ಎಂದು ಬೋಪಯ್ಯ ಅಭಯ ನೀಡಿದ್ರು.