ಕೊಡಗು : ವಿರಾಜಪೇಟೆ ತಾಲ್ಲೂಕಿನ ತೋರಾ ಗ್ರಾಮದಲ್ಲಿ ಆಗಸ್ಟ್‌ನಲ್ಲಿ ಸುರಿದ ಭಾರಿ ಮಳೆಯಿಂದ ಸಂಭವಿಸಿದ್ದ ಭೂಕುಸಿತದಲ್ಲಿ ಕಣ್ಮರೆಯಾದ ನಾಲ್ಕು ಪ್ರಕರಣವನ್ನು ವಿಶೇಷವೆಂದು ಪರಿಗಣಿಸಿರುವ ರಾಜ್ಯ ಸರ್ಕಾರ ಆ 4 ಕುಟುಂಬಗಳಿಗೆ ತಲಾ 5 ಲಕ್ಷ ರೂದಂತೆ ಪರಿಹಾರ ವಿತರಿಸಲು ನಿರ್ಧರಿಸಿ, ಪರಿಹಾರ ನಿಧಿಯಿಂದ ನಾಲ್ಕೂ ಕುಟುಂಬಕ್ಕೆ ತಲಾ 1 ಲಕ್ಷದಂತೆ ತಾತ್ಕಾಲಿಕ ಪರಿಹಾರ ನೀಡಲಾಗಿತ್ತು. ಈಗ ಸರ್ಕಾರದ ಆದೇಶದಂತೆ ಪೂರ್ಣ ಪರಿಹಾರ ಸಿಗಲಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ತಿಳಿಸಿದ್ದಾರೆ.
ಗುಡ್ಡ ಕುಸಿತದಲ್ಲಿ ಹರೀಶ್ ಮತ್ತು ಪ್ರಭು ಕುಟುಂಬದ ಒಟ್ಟು ನಾಲ್ವರು ಕಣ್ಮರೆಯಾಗಿದ್ದರು. ಸತತ 22 ದಿನಗಳ ಶೋಧದ ಬಳಿಕ ಕಾರ್ಯಾಚರಣೆ ಸ್ಥಗಿತಕ್ಕೆ ಹರೀಶ್ ಮತ್ತು ಪ್ರಭು ಕುಟುಂಬಗಳು ಸಮ್ಮತಿಸಿದ್ದರು. ಮೃತದೇಹ ಸಿಗದೆ, ಪರಿಹಾರ ದೊರೆಯದ ಹಿನ್ನಲೆ ವಿಶೇಷ ಪ್ರಕರಣವೆಂದು ಪರಿಗಣಿಸುವಂತೆ ಕೊಡಗು ಎಸ್ಪಿ ಸುಮನ್ ಡಿ ಪನ್ನೇಕರ್ ವರದಿ ಆಧರಿಸಿ ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು.
120 ಮಂದಿ ಸಿಬ್ಬಂದಿ, 6 ಹಿಟಾಚಿಗಳು, ಎಡಿಆರ್‌ಎಫ್, ಗರುಡ, ಪೊಲೀಸ್, ಸ್ಥಳೀಯರು ಕಣ್ಮರೆಯಾದವರಿಗೆ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದವು. ಭೂ ಕುಸಿತ ಸ್ಥಳದಲ್ಲಿ ಹೆಚ್ಚಿದ್ದ ನೀರು, ಕೆಸರು ಮಣ್ಣು ತೆರವಿಗೆ ಅಡ್ಡಿ ಹಿನ್ನಲೆ ಹುಡುಕಾಟ ನಿಲ್ಲಿಸಲಾಗಿತ್ತು.