ಕೊಡಗು: ಜಿಲ್ಲೆಯನ್ನು ಕೊರೊನಾ ಮುಕ್ತ ಮಾಡಲು ಜಿಲ್ಲಾಡಳಿತ ಸತತ ಪ್ರಯತ್ನ ಮಾಡುತ್ತಿದ್ದು, ಜನರ ಸ್ಪಂದನೆ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಹೇಳಿದರು.
ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 24 ಮಂದಿ ಸಾಮಾನ್ಯ ವಾರ್ಡ್ನಲ್ಲಿದ್ದಾರೆ. 29 ಸೋಂಕಿತರು ಐಸಿಯುನಲ್ಲಿದ್ದು, 101 ಮಂದಿ ಆಕ್ಸಿಜನ್ ಬೆಂಬಲದಲ್ಲಿದ್ದಾರೆ. ಗೋಣಿಕೊಪ್ಪದ ಖಾಸಗಿ ಲೋಪಮುದ್ರ ಕೋವಿಡ್ ಆಸ್ಪತ್ರೆಯಲ್ಲಿ 9 ಮಂದಿಗೆ ಚಿಕಿತ್ಸೆ ದೊರಕುತ್ತಿದೆ ಎಂದು ಅವರು ಹೇಳಿದರು.
ಪ್ರತಿದಿನ 1,000 ಜನರಿಗೆ ಕೋವಿಡ್ ಪರೀಕ್ಷೆ ಮಾಡುವ ಗುರಿ ಇದೆ. ಆದರೆ ಜಿಲ್ಲೆಯಲ್ಲಿ ದಿನನಿತ್ಯ 1,600ಕ್ಕೂ ಹೆಚ್ಚು ಜನರು ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ಜಿಲ್ಲೆಯಲ್ಲಿ 38 ಕೋವಿಡ್ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದವರು, ಸೋಂಕು ಲಕ್ಷಣ ಇದ್ದವರು ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೋಂಕು ಲಕ್ಷಣ ಇದ್ದರೆ ತಡಮಾಡದೆ ಪರೀಕ್ಷೆಗೆ ಮುಂದಾಗಿ, ಪ್ರಾಥಮಿಕ ಹಂತದಲ್ಲಿಯೇ ಗುಣಮುಖರಾಗಬೇಕು. ಎಲ್ಲಾ ರೀತಿಯ ಆರೋಗ್ಯ ಚಿಕಿತ್ಸಾ ಸೌಲಭ್ಯಗಳು ಜಿಲ್ಲೆಯಲ್ಲಿದೆ ಎಂದು ಡಿಸಿ ಇದೇ ವೇಳೆ ಹೇಳಿದರು.
ಲಾಕ್ಡೌನ್ ಪರಿಣಾಮ ಹಾಗೂ ಜಿಲ್ಲೆಯ ಜನರ ಸಹಕಾರದಿಂದ ಜಿಲ್ಲೆಯಲ್ಲಿ ಪಾಸಿಟಿವಿಟಿ ಪ್ರಮಾಣ ಕಡಿಮೆಯಾಗುತ್ತಿದೆ. ಇದೇ ರೀತಿ ಮುಂದಿನ ದಿನಗಳಲ್ಲಿಯೂ ಸಹಕಾರವಿರಲಿ. ಸರ್ಕಾರದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಕೋರಿದರು.
ಜಿಲ್ಲೆಯಲ್ಲಿ 600 ಹೆಚ್ಚು ಶಿಕ್ಷಕರು ಕೊರೊನಾ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು ಇವರ ಕೆಲಸ ಶ್ಲಾಘನೀಯ ಎಂದರು. ಕೊರೊನಾ ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದವರು ಕಡ್ಡಾಯವಾಗಿ ಗೃಹ ಸಂಪರ್ಕದಲ್ಲಿ ಇರಬೇಕು. ಕೋವಿಡ್ ಆಸ್ಪತ್ರೆಯಲ್ಲಿ ಈಗಾಗಲೇ ಸಹಾಯವಾಣಿ ತೆರೆಯಲಾಗಿದೆ. ಜೊತೆಗೆ ಸಹಾಯವಾಣಿ 1077 ಕ್ಕೆ ಯಾವುದೇ ರೀತಿಯ ಸಮಸ್ಯೆ ಸಂಬಂಧಿತ ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಇ- ಸಂಜೀವಿನಿ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಕೋವಿಡ್ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ ಜಿಲ್ಲೆಯಲ್ಲಿ ಕೋವಿಡ್ ನಿರೋಧಕ ಲಸಿಕೆ ಇದ್ದು, ಸರ್ಕಾರದ ನಿಯಮದಂತೆ ನೀಡಲಾಗುತ್ತಿದೆ ಎಂದರು.
ಇದನ್ನೂ ಓದಿ: ಕೂಡಿಟ್ಟ ಹಣ ಕರಗಿತು; ಕೆಲಸವಿಲ್ಲದೆ ಬದುಕಾಯ್ತು ಬರ್ಬಾದ್: ಬಡ, ಮಧ್ಯಮ ವರ್ಗಕ್ಕೆ ಶಾಪವಾದ ಕೊರೊನಾ