ಭಾಗಮಂಡಲ (ಕೊಡಗು ): ತಲಕಾವೇರಿ ದೇವಾಲಯಕ್ಕೆ ಬೆಟ್ಟ ಆಗೆದು ದಾರಿ ಮಾಡಲಾಗಿದ್ದು, ಜೇಡಿ ಮಣ್ಣಿನಿಂದ ಕೂಡಿದ ಪ್ರದೇಶವಾದ್ದರಿಂದ ಮತ್ತು ನೀರು ಒಸರುತ್ತಿರುವುದರಿಂದ ಗುಡ್ಡ ಕುಸಿತ ಸಂಭವಿಸುವ ಅಪಾಯವಿದೆ ಎಂದು ಇಂದು ಬ್ರಹ್ಮಗಿರಿ ಬೆಟ್ಟ ಕುಸಿತದಲ್ಲಿ ಕಣ್ಮರೆಯಾದ ಅರ್ಚಕ ನಾರಾಯಣ ಆಚಾರ್ ಈ ಹಿಂದೆಯೇ ಮುನ್ನೆಚ್ಚರಿಕೆ ನೀಡಿದ್ದರು.
2019 ರಲ್ಲಿ ಕೊಡಗಿನಾದ್ಯಂತ ಭಾರೀ ಭೂ ಕುಸಿತ ಸಂಭವಿಸಿದ ಸಂದರ್ಭ ತಲಕಾವೇರಿಯ ಬ್ರಹ್ಮಗಿರಿಲ್ಲೂ ಬಿರುಕು ಕಾಣಿಸಿಕೊಂಡಿತ್ತು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅರ್ಚಕ ನಾರಾಯಣ ಆಚಾರ್, ಬೆಟ್ಟ ಕುಸಿತ ಸಂಭವಿಸುವ ಆತಂಕ ವ್ಯಕ್ತಪಡಿಸಿದ್ದರು. ಜಿಲ್ಲಾಡಳಿತ ಈ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.
ವಿಪರ್ಯಾಸವೆಂದರೆ, ಇಂದು ನಡೆದ ಬೆಟ್ಟ ಕುಸಿತದಿಂದ ನಾರಾಯಣ ಆಚಾರ್ ಅವರ ಸಮೇತ ಇಡೀ ಕುಟುಂಬವೇ ಕಣ್ಮರೆಯಾಗಿದೆ. ಅವರ ಮನೆಯಿದ್ದ ಪ್ರದೇಶದಲ್ಲಿ ಕುರುಹುಗಳು ಇಲ್ಲದಂತೆ ಮಾಯವಾಗಿದೆ.