ಕೊಡಗು: ಕೊಡಗು ಜಿಲ್ಲೆಯಲ್ಲಿ ವರುಣನ ಆರ್ಭಟ ತಗ್ಗದ ಹಿನ್ನೆಲೆಯಲ್ಲಿ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳಿಗೆ ಇಂದೂ ಕೂಡಾ (ಮಂಗಳವಾರ) ರಜೆ ಘೋಷಣೆ ಮಾಡಲಾಗಿದೆ. ಪರೀಕ್ಷೆ ಹಿನ್ನೆಲೆಯಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳನ್ನು ಹೊರತುಪಡಿಸಿ ಜಿಲ್ಲೆಯ ಎಲ್ಲ ಶಿಕ್ಷಕ ಸಂಸ್ಥೆಗಳಿಗೆ ರಜೆ ನೀಡಿ ಕೊಡಗು ಡಿಸಿ ವೆಂಕಟ್ ರಾಜ್ ಆದೇಶ ಹೊರಡಿಸಿದ್ದಾರೆ.
ಸಂಪಾಜೆ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಕೊಯನಾಡು ಸಮೀಪದ ಕಿಂಡಿ ಅಣೆಕಟ್ಟಿನ ಸೇತುವೆ ಬಳಿ ನೀರಿನ ಹರಿವು ಹೆಚ್ಚಾಗಿದೆ. ಮಡಿಕೇರಿ ತಾಲೂಕು ಮೇಘತ್ತಾಳು ಗ್ರಾಮದ ಐ.ಜಿ.ಕಾರ್ಯಪ್ಪ ಅವರು ನಿರ್ಮಿಸಿದ್ದ ಕೆರೆ ಒಡೆದು ಪಕ್ಷದ ಕಾಫಿ ತೋಟ ಹಾಗೂ ರಸ್ತೆಗೆ ಹಾನಿಯಾಗಿದೆ. ಮಳೆ ನೀರಲ್ಲಿ ಮರದ ದೊಡ್ಡ ದಿಮ್ಮಿಗಳು ಹರಿದುಬಂದಿದ್ದು, ಜೆಸಿಬಿ ಮೂಲಕ ತೆರವುಗೊಳಿಸಿ, ನೀರು ಸರಾಗವಾಗಿ ಹರಿಯುವಂತೆ ಮಾಡಲಾಯಿತು.
ಶಾಂತಳ್ಳಿ ಹೋಬಳಿ ಮಲ್ಲಳ್ಳಿಗೆ ತೆರಳುವ ಮಾರ್ಗದಲ್ಲಿರುವ ಸಣ್ಣ ಸೇತುವೆಯ ತೂಬಿನಲ್ಲಿ ಮರದ ದಿಮ್ಮಿ ಮತ್ತು ಕಸ ಕಡ್ಡಿಗಳು ತುಂಬಿ ಹೊಳೆ ನೀರು ಸೇತುವೆ ಮೇಲೆ ಹರಿಯುತ್ತಿತ್ತು. ಇದನ್ನು ಗಮನಿಸಿ, ಹಿಟಾಚಿಯಿಂದ ಮರದ ದಿಮ್ಮಿ ಮತ್ತು ಕಸಕಡ್ಡಿಯನ್ನು ತೆಗೆಯಲಾಯಿತು. ಈಗ ಸೇತುವೆ ಮೇಲೆ ನೀರಿನ ಪ್ರಮಾಣ ಕಡಿಮೆಯಾಗಿದೆ ಎಂದು ಕಂದಾಯ ಇಲಾಖೆ ಸ್ಥಳೀಯ ಅಧಿಕಾರಿಗಳು ತಿಳಿಸಿದರು.
ಅಮ್ಮತ್ತಿ ಹೋಬಳಿ ಬಾಡಗ ಬಾಣಂಗಾಲ ಗ್ರಾಮದಲ್ಲಿ ಮಳೆಯಿಂದಾಗಿ ಮಾಲತಿ ಎಂಬವರ ಮನೆಗೆ ಹಾನಿಯಾಗಿದೆ. ದಕ್ಷಿಣ ಕೊಡಗಿನಲ್ಲಿ ಉತ್ತಮ ಮಳೆಯಾಗಿದ್ದು ಹುದಿಕೇರಿ ಹೋಬಳಿ ಬಲ್ಯಮುಂಡೂರು ಗ್ರಾಮದ ಲಕ್ಷ್ಮಣ ತೀರ್ಥ ನದಿ ತುಂಬಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿರುವ ಜನರು ಸುರಕ್ಷಿತವಾಗಿ ಇರುವಂತೆ ಸೂಚನೆ ನೀಡಲಾಗಿದೆ.
ಮಡಿಕೇರಿ-ಮಂಗಳೂರು ಹೆದ್ದಾರಿ ಮದೆ ಸಮೀಪದ ಕರತೋಜಿ ಬಳಿ ಹೆಚ್ಚಿನ ಮಳೆಯಿಂದಾಗಿ ಬೃಹತ್ ಮರ ರಸ್ತೆಗೆ ಬಿದ್ದು ಸಾರಿಗೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಲ್ಲಾಳ್, ತಹಶೀಲ್ದಾರ್ರಾದ ಕಿರಣ್ ಗೌರಯ್ಯ, ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಭಿಯಂತರರು, ಅರಣ್ಯ ಇಲಾಖೆಯ ಸಿಬ್ಬಂದಿ, ಸ್ಥಳೀಯರ ಸಹಕಾರದೊಂದಿಗೆ ಮರ ತೆರವುಗೊಳಿಸಿ ಸುಗಮ ಸಾರಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.
ಕೊಡಗು ಜಿಲ್ಲೆಯ ಮಳೆ ವಿವರ (ಮಿ.ಲಿ ಮೀಟರ್ಗಳಲ್ಲಿ): ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 118.77 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ದಿನ 14.02 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1310.47 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1869.78 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 173.43 ಮಿ.ಮೀ. ಕಳೆದ ವರ್ಷ ಇದೇ ದಿನ 26.95 ಮಿ.ಮೀ ಹಾಗೂ ಜನವರಿಯಿಂದ ಈವರೆಗಿನ ಮಳೆ 1923.37 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2618.21 ಮಿ.ಮೀ. ಮಳೆ ಬಿದ್ದಿದೆ.
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿ, ಇಂದಿನ ನೀರಿನ ಮಟ್ಟ 2,853.77 ಅಡಿ. ಕಳೆದ ವರ್ಷ ಇದೇ ದಿನ 2,856.05 ಅಡಿ. ಹಾರಂಗಿಯಲ್ಲಿ ಬಿದ್ದ ಮಳೆ 62.40 ಮಿ.ಮೀ., ಕಳೆದ ವರ್ಷ ಇದೇ ದಿನ 5.20 ಮಿ.ಮೀ. ಇಂದಿನ ನೀರಿನ ಒಳಹರಿವು 17,972 ಕ್ಯುಸೆಕ್, ಕಳೆದ ವರ್ಷ ಇದೇ ದಿನ 2,766 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು 23,937 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು 2,800 ಕ್ಯುಸೆಕ್. ನಾಲೆಗೆ 20 ಕ್ಯುಸೆಕ್.