ಸೋಮವಾರಪೇಟೆ: ತಾಲೂಕಿನ ಜಂಬೂರು ಬಾಣೆಯಲ್ಲಿ 2018ರ ನೆರೆ ಸಂತ್ರಸ್ತರಿಗೆ ನಿರ್ಮಾಣ ಮಾಡುತ್ತಿರುವ ಮನೆಗಳ ಸ್ಥಳಕ್ಕೆ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಗಣೇಶ್ ನೇತೃತ್ವದ ನಿಯೋಗವು ಭೇಟಿ ನೀಡಿ ಮನೆ ನಿರ್ಮಾಣ ಪ್ರಗತಿ ಹಾಗೂ ಸಂತ್ರಸ್ತರ ಸಮಸ್ಯೆ ಆಲಿಸಿದರು.
2018 ರಲ್ಲಿ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡ 840 ನಿರಾಶ್ರಿತರಿಗೆ ಮನೆ ನಿರ್ಮಿಸಲಾಗುತ್ತಿದೆ. ಜಂಬೂರು, ಕರ್ಣಂಗೇರಿಯಲ್ಲಿ ಮನೆ ನಿರ್ಮಾಣ ಮಾಡಲಾಗುತ್ತಿದೆ. ಅಂದಾಜು ಪ್ರತಿ ಮನೆಗೆ 10 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಇದೇ 29 ಕ್ಕೆ ಸಂತ್ರಸ್ತರಿಗೆ ಮನೆ ಹಸ್ತಾಂತರ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ಆದರೆ ಕೆಲಸಗಳು ಇನ್ನೂ ಪೂರ್ಣಗೊಂಡಿಲ್ಲ. ಮನೆ ನಿರ್ಮಾಣದಲ್ಲಿ ಕಳಪೆ ಕಾಮಗಾರಿಯಾಗಿದೆ. ಅರೆಬರೆ ಕಾಮಗಾರಿ ನಡೆಸಿ ಮನೆ ಹಸ್ತಾಂತರ ಮಾಡುವುದು ಬೇಡ. ಪೂರ್ಣ ಕಾಮಗಾರಿ ಮುಗಿಸಿಯೇ ಮನೆ ಹಸ್ತಾಂತರ ಮಾಡಿ. ಇನ್ನೂ ಎರಡು ತಿಂಗಳು ಕಾಯುತ್ತೇವೆ ಎಂದು ಸಂತ್ರಸ್ತರೇ ಮನವಿ ಮಾಡಿದ್ದಾರೆ. ಜೂ. 1ರಿಂದ ಮನೆಯನ್ನೂ ಏಕಾಏಕಿ ಹಸ್ತಾಂತರ ಮಾಡಿದರೆ ಸಂತ್ರಸ್ತರಿಗೆ ಕಷ್ಟವಾಗಲಿದೆ. ಇನ್ನು ಎರಡು ತಿಂಗಳು ಬಾಡಿಗೆ ಪಾವತಿ ಮಾಡಲಿ. ಪೂರ್ಣವಾಗಿ ಕೆಲಸ ಮುಗಿಸಿ ಹಸ್ತಾಂತರ ಮಾಡಿದರೆ, ಅನುಕೂಲವಾಗಲಿದೆ ಎಂದು ಸಂತ್ರಸ್ತರು ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಗಣೇಶ್ ಅವರು, ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ನಡೆದು ಮನೆ ಹಸ್ತಾಂತರ ಮಾಡಬೇಕು. ಈ ವಿಚಾರವನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೂ ಮಾತನಾಡುತ್ತೇನೆ. ಮನೆ ನಿರ್ಮಾಣಕ್ಕೆ ಎಚ್‌ಡಿಕೆ ಅವರ ಕಾಣಿಕೆ ದೊಡ್ಡದಿದೆ. 2019ರಲ್ಲಿ ಪ್ರವಾಹ ಬಂದಿತ್ತು. ಆದರೆ, ಬಿಜೆಪಿ ಸರ್ಕಾರದಿಂದ ಯಾವುದೇ ಕೆಲಸಗಳು ಆಗಿಲ್ಲ. ಮನೆ ಕೆಲಸ ಆಗಲೂ ಇನ್ನೂ ಎರಡರಿಂದ ಮೂರು ತಿಂಗಳು ಬೇಕು. 2019ರ ಡಿಸೆಂಬರ್ ವರೆಗೆ ಬಾಡಿಗೆ ಪಾವತಿಯಾಗಿದೆ. ಮನೆ ಕಾಮಗಾರಿಯನ್ನು ಪೂರ್ಣ ಮುಗಿಸಿಯೇ ಹಸ್ತಾಂತರ ಮಾಡಬೇಕು ಎಂದರು.