ಕೊಡಗು: ಕರ್ನಾಟಕ ಹಾಗೂ ಕೇರಳ ಗಡಿಭಾಗದಲ್ಲಿ ನಕ್ಸಲ್ ಚಟುವಟಿಕೆಗಳು ಸಕ್ರಿಯವಾಗಿರುವುದರಿಂದ ಜಿಲ್ಲೆಯ ಗಡಿಗಳಲ್ಲಿ ಕೂಂಬಿಂಗ್ ತೀವ್ರಗೊಳಿಸಲು ಸೂಚಿಸಿದ್ದೇನೆ ಎಂದು ಗೃಹಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 2 ನಕ್ಸಲ್ ನಿಗ್ರಹ ಪಡೆಗಳು ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿವೆ. ಗಡಿ ಪ್ರದೇಶಗಳಲ್ಲಿ ನಕ್ಸಲ್ ಚಟುಚಟಿಕೆಗಳು ಸಕ್ರಿಯವಾಗಿರುವುದರಿಂದ ಮತ್ತೊಂದು ನಕ್ಸಲ್ ನಿಗ್ರಹ ಪಡೆಯನ್ನು ಕಾರ್ಯರೂಪಕ್ಕೆ ತರಲು ಸಿದ್ಧತೆ ನಡೆಸಿದ್ದು, ಆರ್ಥಿಕ ಇಲಾಖೆಯಿಂದ ಸಹಕಾರ ನೀಡುವಂತೆ ಕೋರಿದ್ದೇನೆ ಎಂದರು.
ಭೂ ಕುಸಿತದಂತಹ ತುರ್ತು ಸಂದರ್ಭದಲ್ಲಿ ಮತ್ತೊಂದು ಎಸ್‌ಡಿಆರ್‌ಎಫ್ ಕಾರ್ಯಪಡೆಯನ್ನು ಅಸ್ತಿತ್ವಕ್ಕೆ ತರಲು ಸಂಬಂಧಪಟ್ಟ ಇಲಾಖೆಯೊಂದಿಗೆ ಮಾತನಾಡಿದ್ದೇನೆ. ಮೈಸೂರು ಭಾಗದಲ್ಲಿ ಶಾಶ್ವತವಾಗಿ ಎಸ್‌ಡಿಆರ್‌ಎಫ್ ತಂಡ ಇರುವಂತೆ ಮಾಡಲಾಗುವುದು. ಡ್ರಗ್ಸ್ ಮುಕ್ತ ಕರ್ನಾಟಕ ರಾಜ್ಯಕ್ಕೆ ಪೊಲೀಸ್ ಇಲಾಖೆ ಪಣ ತೊಟ್ಟಿದೆ. ಈಗಾಗಲೇ ಡ್ರಗ್ಸ್ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಡ್ರಗ್ಸ್ ದಂಧೆಯನ್ನು ಮಟ್ಟ ಹಾಕುತ್ತಿದ್ದೇವೆ ಎಂದರು.
ಗೃಹ ಇಲಾಖೆ ವ್ಯಾಪ್ತಿಯ ವಿಚಾರಗಳು ಹಾಗೂ ಕಾರ್ಯ ದಕ್ಷತೆಯ ಬಗ್ಗೆ ಸಮಾಲೋಚನೆ ನಡೆಸಿದ್ದೇವೆ. ಪ್ರಮುಖವಾಗಿ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚಿಸಿದ್ದೆವೆ. ಕಳೆದ ಐದಾರು ತಿಂಗಳಿಂದ ಪೊಲೀಸ್ ಇಲಾಖೆ ಭೂ ಕುಸಿತ ಹಾಗೂ ಪ್ರವಾಹದ ಸಂದರ್ಭದಲ್ಲಿ ಇತರೆ ಇಲಾಖೆಗಳೊಂದಿಗೆ ಎನ್‌ಡಿಆರ್‌ಎಫ್ ತಂಡಗಳೊಂದಿಗೆ ಉತ್ತಮವಾಗಿ ಕೆಲಸವನ್ನು ಮಾಡಿದೆ.
ಕೊರೊನಾ ತಡೆಯುವಲ್ಲಿ ಯಶಸ್ವಿ ಕ್ರಮಗಳನ್ನು ತೆಗೆದುಕೊಂಡಿದೆ. ಜಿಲ್ಲೆಯಲ್ಲಿ ಭೌಗೋಳಿಕವಾಗಿ ಮನೆಗಳು ದೂರವಿರುವುದರಿಂದ ವಿಶೇಷವಾಗಿ ಕೊಲೆ ಹಾಗೂ ಅತ್ಯಾಚಾರಗಳ ಬಗ್ಗೆ ಗಮನಹರಿಸುವಂತೆ ಸೂಚಿಸಿದ್ದೇವೆ. ಜಿಲ್ಲೆಯ ರೆಸಾರ್ಟ್ ಮತ್ತು ಹೋಮ್ ಸ್ಟೇಗಳಲ್ಲಿ ಡ್ರಗ್ಸ್ ಮಾರಾಟ ಮತ್ತು ದಂಧೆಗೆ ಕಡಿವಾಣ ಹಾಕಲು ಕ್ರಮ ವಹಿಸಲಾಗುವುದು. ಜಿಲ್ಲೆಯಲ್ಲಿ ಅಕ್ರಮ ಗೋಮಾಂಸ ಮಾರಾಟ ಸಾಗಾಟಕ್ಕೂ ಕ್ರಮ ವಹಿಸಲು ಸೂಚಿಸಿದ್ದೇವೆ ಎಂದರು.