ಕೊಡಗು: ಜಿಲ್ಲೆಯಲ್ಲಿರುವ ಹೆಚ್ಚಿನ ಅರಣ್ಯ ಪ್ರದೇಶ ಮತ್ತು ವಾತಾವರಣ ಜೇನು ಕೃಷಿಗೆ ಹೇಳಿ ಮಾಡಿಸಿದಂತಿದೆ. ಈ ಅವಕಾಶವನ್ನು ಬಳಸಿಕೊಂಡು ಕೃಷಿಕರೊಬ್ಬರು ಕಾಫಿ ಬೆಳೆಯ ಜೊತೆ ಜೊತೆಗೆ ಜೇನು ಸಾಕಾಣಿಕೆ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಮಡಿಕೇರಿ ತಾಲೂಕಿನ ಬೆಟ್ಟತ್ತೂರಿನ ಕೆಂಚಪ್ಪ ಜೇನು ಸಾಕಾಣಿಕೆ ಮಾಡಿ ಲಾಭಗಳಿಸಿದ ರೈತ. 84 ವರ್ಷದ ಕೆಂಚಪ್ಪ, ಇಳಿ ವಯಸ್ಸಿನಲ್ಲೂ ಜೇನು ಸಾಕಾಣಿಕೆ ಮಾಡುತ್ತಾ ಬಿಡುವಿನ ವೇಳೆ ಯುವಕರನ್ನು ನಾಚಿಸುವಂತೆ ತೋಟದಲ್ಲಿ ಕೆಲಸ ಮಾಡುತ್ತಾರೆ. ಈ ಹಿಂದೆ ಇವರು 400 ಕೆ.ಜಿಯಷ್ಟು ಜೇನು ತೆಗೆಯುತ್ತಿದ್ದರಂತೆ. ಇತ್ತೀಚೆಗೆ ನೈಸರ್ಗಿಕ ಕಾಡನ್ನು ಕಡಿದು ಕಾಫಿಯನ್ನೇ ಪ್ರಧಾನ ಬೆಳೆಯಾಗಿ ಮಾಡಿಕೊಂಡ ಪರಿಣಾಮ, ಜೇನು ಹುಳಗಳಿಗೆ ಹೇರಳವಾಗಿ ಸಿಗುತ್ತಿದ್ದ ಮಕರಂದ ಸಿಗುತ್ತಿಲ್ಲ. ಆದ್ದರಿಂದ ಎಲ್ಲೆಡೆ ಶುದ್ದ ಜೇನು ತುಪ್ಪದ ಹೆಸರಿನಲ್ಲಿ ಕಲಬೆರಕೆ ಜೇನು ತುಪ್ಪ ಮಾರಲಾಗ್ತಿದೆ. ಆದರೆ, ಕೆಂಚಪ್ಪ ಮಾತ್ರ ತನ್ನ ಕಾಫಿ ತೋಟದಲ್ಲೇ ಜೇನು ಸಾಕಾಣಿಕೆ ಮಾಡಿ, ಶುದ್ದ ತುಪ್ಪವನ್ನು ಮಾರಾಟ ಮಾಡುತ್ತಿದ್ದಾರೆ.
ತಂದೆಗೆ ಸುಮಾರು 84 ವಯಸ್ಸಾಗಿದೆ, 2 ಎಕರೆ ಇರುವ ಕಾಫಿ ತೋಟದಲ್ಲಿ ಸುಮಾರು 25 ಜೇನು ಪೆಟ್ಟಿಗೆಗಳನ್ನು ಇಟ್ಟಿದ್ದಾರೆ. ಕಾಫಿ ತೋಟದ ನಿರ್ವಹಣೆ ಜೊತೆಗೆ ಜೇನು ಕೃಷಿ ಮಾಡುತ್ತಾರೆ, ವಾರ್ಷಿಕವಾಗಿ 35 ಸಾವಿರ ರೂ ಲಾಭ ಗಳಿಸುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಏಣಿ ಬಳಸಿಕೊಂಡು ಕಾಳು ಮೆಣಸು ಕೊಯ್ಯುವುದರ ಜೊತೆಗೆ ತೋಟದಲ್ಲಿಯೂ ಕೆಲಸ ಮಾಡುತ್ತಾರೆ. ತಂದೆಯ ಕೆಲಸವನ್ನು ನಾವು ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ಕೆಂಚಪ್ಪರ ಮಗ ವಿಘ್ನೇಶ್ ಹೇಳಿದ್ದಾರೆ.