ಕೊಡಗು: ಹಿಂದೂ ಸಂಘಟನೆ ಕಾರ್ಯಕರ್ತ ಪ್ರವೀಣ್ ಪೂಜಾರಿ ಕೊಲೆ ಪ್ರಕರಣದ 9 ಜನ ಆರೋಪಿಗಳು ದೋಷಮುಕ್ತರೆಂದು ಮಡಿಕೇರಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಮಂಗಳವಾರ ತೀರ್ಪು ಪ್ರಕಟಿಸಿದ ಮಡಿಕೇರಿ ಕೋರ್ಟ್, ಪ್ರಕರಣದ ಎಲ್ಲ 9 ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿದೆ. 2016ರ ಆಗಸ್ಟ್ 14ರ ರಾತ್ರಿ ಅಖಂಡ ಭಾರತ ಸಂಕಲ್ಪ ಯಾತ್ರೆ ಮುಗಿಸಿ ಹಿಂತಿರುಗುವ ವೇಳೆ ಬಾಡಿಗೆಯ ನೆಪದಲ್ಲಿ ಆಟೋದಲ್ಲಿ ಕರೆದೊಯ್ದು ಗುಡ್ಡೆಹೊಸೂರು ಸಮೀಪ ಪ್ರವೀಣ್ ಪೂಜಾರಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಆರೋಪವನ್ನು ಆರೋಪಿಗಳು ಎದುರಿಸುತ್ತಿದ್ದರು.
ಪ್ರವೀಣ್ ಕೊಲೆಗೈದ ಆರೋಪಿಗಳನ್ನು ಬಂಧಿಸಬೇಕೆಂದು ಹಿಂದೂಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದ್ದವು. ಆ ವೇಳೆ ಉದ್ವಿಗ್ನ ಪರಿಸ್ಥಿತಿ ಉಂಟಾದ ಹಿನ್ನೆಲೆ ಕುಶಾಲನಗರ ಪಟ್ಟಣದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು.
ಆರೋಪಿಗಳ ಪರ ವಕೀಲರಾದ ಅಬುಬೂಕರ್. ಟಿ.ಹೆಚ್.ಎ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಿ ನ್ಯಾಯಾಧೀಶರ ಮುಂದೆ ವಾದ ಮಂಡಿಸಿ ತಮ್ಮ ಕಕ್ಷಿದಾರರು ನಿರ್ದೋಷಿಗಳೆಂದು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರವೀಣ್ ಪೂಜಾರಿ ಪರ ವಾದ ಮಂಡಿಸಿದ ಸರ್ಕಾರಿ ವಕೀಲರ ಬಳಿ ಸರಿಯಾದ ಸಾಕ್ಷ್ಯಾಧಾರದ ಕೊರತೆ ಇತ್ತು. ಈ ಹಿನ್ನೆಲೆಯಲ್ಲಿಆರೋಪಿಗಳು ಪ್ರಕರಣದಿಂದ ಖಲಾಸೆಗೊಂಡಿದ್ದಾರೆ.
(ಇದನ್ನೂ ಓದಿ: IPL: ಧೋನಿ, ಕೊಹ್ಲಿಗಿಂತ ಹೆಚ್ಚು ಹಣ ಪಡೆಯುವ ಕ್ರಿಕೆಟಿಗರಿವರು!)